ಮಂಗಳೂರು: ಕರಾವಳಿಗರ ಮೆಚ್ಚಿನ ಪ್ರವಾಸಿ ತಾಣವಾದ ಪಿಲಿಕುಳ ಮೃಗಾಲಯ ಕಳೆದ ಕೆಲ ವರ್ಷಗಳಿಂದ ತೀವ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದ್ದು, ಈ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಾಧೀಶರೇ ಅಚ್ಚರಿಗೊಂಡಿದ್ದಾರೆ.
ವನ್ಯಜೀವಿ ಸಂರಕ್ಷಕ ಭುವನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳು ನರಳುತ್ತಿರುವ ಫೋಟೋಗಳನ್ನು ಪರಿಶೀಲಿಸಿದ ನ್ಯಾಯಪೀಠ ಸರ್ಕಾರದ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತುಕ್ಕು ಹಿಡಿದ ಪಂಜರಗಳು, ಮಲಿನ ನೀರು, ಅಶುಚಿ ವಾತಾವರಣ ಮತ್ತು ಮೇಲಿಂದ ಮೇಲೆ ಪ್ರಾಣಿಗಳ ಸಾವುಗಳು ಪಿಲಿಕುಳ ಝೂವಿನ ದುಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ.
ಲೈಸೆನ್ಸ್ ಅವಧಿ 2025ರ ಡಿಸೆಂಬರ್ನಲ್ಲೇ ಮುಕ್ತಾಯವಾದರೂ ಯಾವುದೇ ಪರವಾನಗಿ ಇಲ್ಲದೆ ಮೃಗಾಲಯ ನಡೆಸಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದೆ. ಪ್ರಾಣಿಗಳಿಗೆ ಸೂಕ್ತ ಆರೈಕೆ ನೀಡಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿರುವ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ.



