ಬೆಳಗಾವಿ:- ಇತ್ತೀಚೆಗೆ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ರಾಜಾತಿಥ್ಯದ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ಬೆನ್ನಲ್ಲೇ ಇದೀಗ ಬೆಳಗಾವಿ ಹಿಂಡಲಗಾ ಜೈಲಿನ ಕರ್ಮಕಾಂಡ ಬಯಲಾಗಿದೆ.
ಹಿಂಡಲಗಾ ಜೈಲಿನಲ್ಲಿ ಕೈದಿಗಳು ಬಿಂದಾಸ್ ಆಗಿ ಮೊಬೈಲ್ ಬಳಸುತ್ತಿರುವುದು, ಗಾಂಜಾ ಸೇವಿಸುತ್ತಿರುವುದು, ಸಿಗರೇಟ್ ಸೇದುವುದು ಬೆಳಕಿಗೆ ಬಂದಿದೆ. ಜೈಲಿಗೆ ಬಿಯರ್ ಸೇರಿದಂತೆ ಎಲ್ಲವೂ ಹೊರಗಿನಿಂದ ಪೂರೈಕೆಯಾಗುತ್ತಿರುವುದು ಬಹಿರಂಗಗೊಂಡಿದೆ.
ಜೈಲಿನ ಸರ್ಕಲ್ ನಂಬರ್ 2ರ ಎರಡನೇ ಬ್ಯಾರಕ್ನಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ರಾಜಾರೋಷವಾಗಿ ಹಣವಿಟ್ಟು ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಹಣ ಕೊಟ್ಟರೆ ಕೈದಿಗಳಿಗೆ 20 ಸಾವಿರ ರೂ. ಬೆಲೆಯ ಆಂಡ್ರಾಯ್ಡ್ ಮೊಬೈಲ್ ಕೂಡ ಸಿಗುತ್ತದಂತೆ. ಶಿಕ್ಷೆ ಅನುಭವಿಸುತ್ತಿರುವ ಕೈದಿಯಿಂದಲೇ ಐಷಾರಾಮಿ ಜೀವನ ಅನಾವರಣಗೊಂಡಿದೆ. ಹಣ ಕೊಟ್ಟರೆ ಜೈಲು ಅಧೀಕ್ಷಕ ಕೃಷ್ಣಮೂರ್ತಿ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂಬ ಆರೋಪ ಕೇಳಿಬಂದಿದೆ.