ಉನ್ನತ ಹುದ್ದೆ ಪಡೆಯಲು ಹಿಂದಿ ಸಹಕಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದಿ ಸಂಪರ್ಕ ಭಾಷೆಯಾಗಿದ್ದು, ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿಕೊಳ್ಳಲು ಅನುಕೂಲವಾಗುತ್ತದೆ. ಆ ಹಿನ್ನೆಲೆಯಲ್ಲಿ ಹಿಂದಿ ರಾಜ್ಯ ಭಾಷಾ ಸಂಘಟನೆಯನ್ನು ಬಲಿಷ್ಠಗೊಳಿಸಲು ಎಲ್ಲಾ ಹಿಂದಿ ಶಿಕ್ಷಕರು ಒಗ್ಗೂಡಬೇಕೆಂದು ಗದಗ ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಲ್. ಬಿಜಾಪುರ ಹೇಳಿದರು.

Advertisement

ನಗರದ ಮಹಾವೀರ ಜೈನ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಹಿಂದಿ ಭಾಷಾ ಶಿಕ್ಷಕರ ಸಮಾಲೋಚನಾ ಸಭೆ ಹಾಗೂ ರಾಜ್ಯಮಟ್ಟದ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಮತ್ತು ಪ್ರಸ್ತುತ ವರ್ಷ ಹಿಂದಿ ಶಿಕ್ಷಕ ಸೇವಾ ನಿವೃತ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದೇಶಗಳಲ್ಲಿ ಹಿಂದಿಯಲ್ಲಿ ಮಾತನಾಡುವವರನ್ನು ಭಾರತೀಯರು ಎಂದು ಗುರುತಿಸಲಾಗುತ್ತದೆ. ಇದು ಎಲ್ಲ ಭಾಷೆಗಳನ್ನು ಜೋಡಿಸುತ್ತದೆ. ದೇಶದಲ್ಲಿ ಸುಮಾರು 4ರಿಂದ 5 ಸಾವಿರ ಭಾಷೆಗಳಿವೆ. ಇತ್ತೀಚಿನ ದಿನಗಳಲ್ಲಿ ಮಾತೃಭಾಷೆ ಕನ್ನಡ ಹಾಗೂ ಹಿಂದಿ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಎಲ್ಲರೂ ಇಂಗ್ಲೀಷ್ ಭಾಷೆಯ ಬೆನ್ನು ಬಿದ್ದಿದ್ದಾರೆ. ಹಿಂದಿ ಸುಂದರ ಭಾಷೆ. ಆದ್ದರಿಂದ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಹಿಂದಿಯ ಮೇಲೆ ಅಭಿಮಾನ ಉಂಟಾಗುವಂತೆ ಮಾಡಬೇಕು ಎಂದು ಹೇಳಿದರು.

ರಾಜ್ಯ ಪ್ರತಿನಿಧಿ ಯು.ಎಸ್. ನಿಪ್ಪಾಣಿಕರ ಮಾತನಾಡಿ, ತೃತೀಯ ಭಾಷೆಗೆ ಎದುರಾಗಿರುವ ಸಮಸ್ಯೆಗಳನ್ನು ಅರಿತು ಎಚ್ಚೆತ್ತುಕೊಳ್ಳುವುದರ ಮೂಲಕ ಹಿಂದಿ ಭಾಷಾ ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ಮಾಡಿ ಹಿಂದಿ ಭಾಷೆಯನ್ನು ಬೆಳೆಸಲು ಮುಂದಾಗಬೇಕೆಂದು ಕರೆ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೆರ್, ಗದಗ ತಾಲೂಕಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರವಿರಾಜ ಪವಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಶಿಕ್ಷಕರು ಮತ್ತು ಪ್ರಸ್ತುತ ವರ್ಷ ಹಿಂದಿ ಶಿಕ್ಷಕ ಸೇವಾ ನಿವೃತ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಆರ್.ಡಿ. ಪವಾರ್ ವಹಿಸಿದ್ದರು. ಹಿಂದಿ ಶಿಕ್ಷಕರಾದ ಧನಸಿಂಗ್ ರಾಠೋಡ, ಕೆ.ಪಿ. ರಾಠೋಡ, ಎಂ.ಬಿ. ಕಿತ್ತೂರ್, ಜಯಶ್ರೀ ಜೋಶಿ, ವಾಸುದೇವ ಕಲಾಲ್, ಎಸ್.ಎಸ್. ಪಾಟೀಲ, ರಾಧಾ ಜಾಲರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಫ್. ಪೂಜಾರ್ ಮಾತನಾಡಿ, ಹಿಂದಿ ಭಾಷೆ ಕಲಿಕೆಗೆ ಸೀಮಿತವಾಗದೆ ಉನ್ನತ ಉದ್ಯೋಗವನ್ನು ಹೊಂದಲು ಕೂಡ ಅನುಕೂಲವಾಗಿದ್ದು, ಇಂದಿನ ಆಧುನಿಕ ಯುಗದಲ್ಲಿ ತೃತೀಯ ಭಾಷೆ ಎಲ್ಲರಿಗೂ ಅಗತ್ಯವಾಗಿದೆ. ಸರ್ಕಾರ ತೃತೀಯ ಭಾಷಾ ನೀತಿಯನ್ನು ಮುಂದುವರೆಸಬೇಕೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here