ಆಗಸ್ಟ್ 25ರಂದು `ಹಿಂದೂ ಧರ್ಮ ಸಂರಕ್ಷಣಾ ಜಾಥಾ’

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರವನ್ನು ಖಂಡಿಸಿ ಆಗಸ್ಟ್ 25ರಂದು ಮುಂಜಾನೆ 10 ಗಂಟೆಗೆ ಪಟ್ಟಣದಲ್ಲಿ ವಿವಿಧ ಮಠಾಧೀಶರು, ಕನ್ನಡಪರ ಸಂಘಟನೆಗಳು ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪಕ್ಷಾತೀತ, ಜ್ಯಾತ್ಯಾತೀತವಾಗಿ ಪೇಟೆ ಶ್ರೀ ಹಾವಳಿ ಆಂಜನೇಯ ದೇವಸ್ಥಾನದಿಂದ ಹೊಸ ಬಸ್ ನಿಲ್ದಾಣದವರೆಗೆ ಹಿಂದೂ ಧರ್ಮ ಸಂರಕ್ಷಣಾ ಬೃಹತ್ ಜಾಥಾ ನಡೆಸಲಾಗುವದು ಎಂದು ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ತಿಳಿಸಿದರು.

Advertisement

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳ ಸೇರಿ ಹಿಂದೂಗಳ ಪವಿತ್ರ ಕ್ಷೇತ್ರಗಳ ಮೇಲೆ ಅವ್ಯಾಹತವಾಗಿ ಅಪಪ್ರಚಾರ ನಡೆಸುವ ಮೂಲಕ ಹಿಂದೂಗಳ ಭಾವನೆಗೆ ದಕ್ಕೆ ತರುವ ಕಾರ್ಯವಾಗುತ್ತಿದೆ. ಈ ಹಿಂದೆ ಶಬರಿಮಲೆ, ತಿರುಪತಿ ಹೀಗೆ ಅನೇಕ ಹಿಂದು ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿರಿಸಿ ಅವುಗಳ ಬಗ್ಗೆ ವ್ಯವಸ್ಥಿತ ಅಪಪ್ರಚಾರ ನಡೆಸಲಾಗಿದೆ. ಇದನ್ನು ಪ್ರತಿಯೊಬ್ಬ ಹಿಂದೂಗಳು ಅರಿಯಬೇಕು. ಸೋಮವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು, ಗಂಜಿಗಟ್ಟಿಯ ಶ್ರೀ ವೈಜನಾಥ ಶಿವಲಿಂಗ ಶ್ರೀಗಳು, ಬೆಳ್ಳಟ್ಟಿಯ ಶ್ರೀ ಬಸವರಾಜ ಶ್ರೀಗಳು, ಲಕ್ಷ್ಮೇಶ್ವರದ ಶ್ರೀ ಮಳೆಮಲ್ಲಿಕಾರ್ಜುನ ಶ್ರೀಗಳು ಆಗಮಿಸಲಿದ್ದಾರೆ. ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ನಡೆದಿರುವ ಹುನ್ನಾರಕ್ಕೆ ಹಿಂದೂಗಳು ಬೇಧ-ಭಾವ ಮರೆತು ಧರ್ಮದ ವಿಷಯ ಬಂದಾಗ ಒಂದಾಗಿ ಹೋರಾಡೋಣ ಎಂದು ಹೇಳಿದರು.

ಮುಖಂಡ ನಾಗರಾಜ ಚಿಂಚಲಿ, ಹೊನ್ನಪ್ಪ ವಡ್ಡರ, ಶಂಕರ ಬ್ಯಾಡಗಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ನಡೆಯುವ ಬೃಹತ್ ಜಾಥಾಕ್ಕೆ ತಾಲೂಕಿನ ಹಿಂದೂಪರ ಸಂಘಟನೆಗಳು, ವಿವಿಧ ಸಂಘಟನೆಗಳು, ಧರ್ಮಸ್ಥಳ ಸ್ವ-ಸಹಾಯ ಸಂಘಗಳು, ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಬಸವರಾಜ ಹಿರೇಮನಿ, ಸುರೇಶ ಹಟ್ಟಿ, ಮಂಜುನಾಥ ಮುಳುಗುಂದ, ಪವನ್ ಬಂಕಾಪುರ, ಸಾಗರ ಕಲಾಲ್ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here