ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೋಟ್ಯಾಂತರ ಹಿಂದೂಗಳ ಶ್ರದ್ಧಾ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಸಮಾಜ ವಿರೋಧಿ ಶಕ್ತಿಗಳ ಕೃತ್ಯವನ್ನು ಖಂಡಿಸಿ ಪಟ್ಟಣದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು, ಧರ್ಮಸ್ಥಳ ಸಂಘದವರು, ಸಾರ್ವಜನಿಕರು ಸೇರಿ ಪಟ್ಟಣದಲ್ಲಿ ಹಿಂದೂ ಧರ್ಮ ಸಂರಕ್ಷಣಾ ಬೃಹತ್ ಜಾಥಾ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಮಾನ ಖಂಡಿಸಿ, ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.
ಪಟ್ಟಣದ ಹಾವಳಿ ಹನುಮಂತದೇವರ ದೇವಸ್ಥಾನದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಜಾಥಾಕ್ಕೆ ಗಂಜಿಗಟ್ಟಿ, ಬೆಳ್ಳಟ್ಟಿ, ಹೂವಿನಶಿಗ್ಲಿ ಹಾಗೂ ಹರದಗಟ್ಟಿ ಶ್ರೀಗಳು ಮಂಜುನಾಥ ಸ್ವಾಮಿಯ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಧರ್ಮದ ಪಾವಿತ್ರ್ಯತೆಯನ್ನು, ಒಗ್ಗಟ್ಟನ್ನು ಹಾಳು ಮಾಡಲು ನೂರಾರು ವರ್ಷಗಳಿಂದ ಸಂಚುಗಳು ನಡೆಯುತ್ತಲೇ ಇವೆ. ಸಾವಿರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಹಿಂದೂ ಧರ್ಮ ಎಂದಿಗೂ ನಾಶವಾಗುವುದಿಲ್ಲ ಎನ್ನುವದನ್ನು ಹಿಂದೂ ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ದೇಶಾದ್ಯಂತ ಕೋಟ್ಯಾಂತರ ಭಕ್ತರನ್ನು ಹೊಂದಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅಪಮಾನಿಸುವ ದುರುದ್ದೇಶದಿಂದ ಕೆಲ ಕಿಡಿಗೇಡಿಗಳು ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಜನರನ್ನು ದಿಕ್ಕು ತಪ್ಪಿಸುವ ಷಡ್ಯಂತ್ರ, ಪಿತೂರಿ ನಿಲ್ಲಬೇಕು ಎಂದರು.
ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿಗಳು ದೂರವಾಣಿಯ ಮೂಲಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಬಸವೇಶ ಮಹಾಂತಶೆಟ್ಟರ, ನಾಗರಾಜ ಚಿಂಚಲಿ, ಪೂರ್ಣಾಜಿ ಕರಾಟೆ, ಬಸಣ್ಣ ಬೆಂಡಿಗೇರಿ, ಹೊನ್ನಪ್ಪ ವಡ್ಡರ ಮಾತನಾಡಿ, ಯಾವುದೋ ಅನಾಮಿಕ ಆರೋಪ ಮಾಡಿದಾಕ್ಷಣ ಎಸ್‌ಐಟಿ ರಚನೆ ಮಾಡಿ ಕಂಡ ಕಂಡಲೆಲ್ಲ ಗುಂಡಿ ತೋಡಿದರೂ ಯಾವದೇ ಕುರಹು ದೊರೆತಿಲ್ಲ. ಅನಾಮಿಕನ ಹಿಂದಿರುವ ದುಷ್ಟ ವ್ಯಕ್ತಿಗಳು ಯಾರು ಮತ್ತು ಅವರು ಮಾಡುತ್ತಿರುವ ಸಂಚುಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಯೂಟ್ಯೂಬರ್‌ಗಳ ಮೇಲೆ ಸರಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು. ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅವಮಾನಿಸುತ್ತಿರುವ ಸಮಾಜ ವಿರೋಧಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ರಾಜು ಕುಂಬಿ, ಮಹೇಶ ಹೊಗೆಸೊಪ್ಪಿನ, ಚಂಬಣ್ಣ ಬಾಳಿಕಾಯಿ, ಕಿರಣ್ ನವಲೆ, ಗಿರೀಶ ಅಗಡಿ, ಪ್ರವೀಣ ಬಾಳಿಕಾಯಿ, ಟಾಕಪ್ಪ ಸಾತಪೂತೆ, ಸೋಮಣ್ಣ ಡಾಣಗಲ್, ಶಂಕರ ಬ್ಯಾಡಗಿ, ಈರಣ್ಣ ಅಂಕಲಕೋಟಿ, ಅಭಯ ಜೈನ್, ನಾರಾಯಣಸಾ ಪವಾರ್, ತಿಪ್ಪಣ್ಣ ಸಂಶಿ, ಪುನೀತ್ ಓಲೇಕಾರ, ಪವನ್ ಬಂಕಾಪುರ, ನೀಲಪ್ಪ ಕರ್ಜಕ್ಕಣ್ಣವರ, ಗಿರೀಶ ಅಗಡಿ, ಅಮರಪ್ಪ ಗುಡಗುಂಟಿ, ಕಿರಣ ನವಲೆ, ಸಿ.ಆರ್. ಲಕ್ಕುಂಡಿಮಠ, ಸಂತೋಷ ಗೋಗಿ, ಅಶೋಕ ಬಟಗುರ್ಕಿ, ಎಂ.ಎನ್. ಬಾಡಗಿ, ವೈಭವ ಗೋಗಿ, ಸುರೇಶ ಹಟ್ಟಿ, ಚಂದ್ರು ಮಾಗಡಿ, ತಿಪ್ಪಣ್ಣ ಸಂಶಿ, ವಿನಯ ಪಾಟೀಲ, ಬಸವರಾಜ ಜಾಲಗಾರ, ಮಂಜು ಮುಳಗುಂದ ಸೇರಿದಂತೆ ಧರ್ಮಸ್ಥಳ ಸಂಘದ ಮಹಿಳೆಯರು, ಭಕ್ತರು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಗಂಜಿಗಟ್ಟಿಯ ಡಾ. ವೈಜನಾಥ ಮಹಾಸ್ವಾಮಿಗಳು, ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಆದರಳ್ಳಿಯ ಕುಮಾರ ಮಹಾರಾಜರು ಮಾತನಾಡಿ, ನಾಡಿನ ಪುಣ್ಯ ಕ್ಷೇತ್ರಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಷಡ್ಯಂತ್ರವನ್ನು ತಡೆಯುವಲ್ಲಿ ಉಗ್ರ ಹೋರಾಟ ನಡೆಸಲೂ ನಾವು ಹಿಂಜರಿಯುವುದಿಲ್ಲ. ನಾಡಿನ ಮಠ-ಮಾನ್ಯಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಕಾರ್ಯ ನಿಲ್ಲಬೇಕು. ಇದು ಒಂದು ದಿನದ ಹೋರಾಟವಲ್ಲ, ಹಿಂದೂ ಧರ್ಮದ ವಿರುದ್ಧ ನಡೆಯುವ ಹೋರಾಟಕ್ಕೆ ಮಠಾಧೀಶರು ಸದಾ ಬೆಂಬಲ ನೀಡುತ್ತೇವೆ ಎಂದು ನುಡಿದರು.