ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲದ ಹಿರೇಮಠವು ಇಲ್ಲಿನ ಜನರಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರತಿ ವರ್ಷದ ಕಾರ್ತಿಕ ಮಾಸದಲ್ಲಿ ಜಾತ್ರೆಯನ್ನು ಆಯೋಜಿಸುವ ಮೂಲಕ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಏಳು–ಎಂಟು ದಿನಗಳ ಕಾಲ ಪ್ರವಚನಗಳ ಮೂಲಕ ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಬುತ್ತಿಯನ್ನು ತುಂಬಿಸುತ್ತಿದ್ದಾರೆ. ಈ ಹಿರೇಮಠದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ಭಾನುವಾರ ಆರಂಭವಾದ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, “ನಮ್ಮ ನಾಡಿನಲ್ಲಿ ವಿದ್ಯಾಭ್ಯಾಸಕ್ಕೆ ಬಲವಾದ ಬುನಾದಿಯನ್ನು ಹಾಕಿದ್ದು ವೀರಶೈವ ಮಠ-ಮಾನ್ಯಗಳು. ಅನ್ನದಾಸೋಹದ ಜೊತೆಗೆ ಶಿಕ್ಷಣದಾಸೋಹವನ್ನೂ ನಡೆಸಿ ಜನತೆ ಬುದ್ಧಿವಂತರಾಗಲು ಕಾರಣರಾದರು. ಹಿರೇಮಠದ ಶ್ರೀಗಳವರು ಶ್ರೀ ರೇಣುಕಾಚಾರ್ಯರ ಹೆಸರಿನಲ್ಲಿ ಸ್ಥಾಪಿಸಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಇದರ ಮೂಲಕ ಈ ಭಾಗದ ಮಕ್ಕಳ ಭವಿಷ್ಯ ಬೆಳಗುತ್ತಿದೆ,” ಎಂದರು.
ಸಮಾರಂಭವನ್ನುದ್ದೇಶಿಸಿ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ —
“ಮನುಷ್ಯ ಕನಿಷ್ಠ ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪುರಾಣ-ಪ್ರವಚನಗಳನ್ನು ಕೇಳಬೇಕು. ಕೇಳಿದ ವಿಷಯಗಳಲ್ಲಿ ಕೆಲವು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಜನ್ಮ ಸಾರ್ಥಕವಾಗುತ್ತದೆ. ಅದಕ್ಕಾಗಿ ಪ್ರತಿ ವರ್ಷ ಶ್ರೀಮಠದಲ್ಲಿ ಜಾತ್ರಾಮಹೋತ್ಸವವನ್ನು ಆಯೋಜಿಸುತ್ತಿದ್ದೇವೆ,” ಎಂದರು.
ವೇದಿಕೆಯಲ್ಲಿ ಪ.ಪಂ ಸದಸ್ಯರು ಸಕ್ರೆಪ್ಪ ಹಡಪದ, ಶೇಖಪ್ಪ ಕೆಂಗಾರ, ಸಂಗೀತ ಬಳಗದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಎಂ.ಕೆ. ಬೇವಿನಕಟ್ಟಿ ನಿರ್ವಹಿಸಿದರು.
ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, “ಈ ಬಾರಿ ಪ್ರತಿ ವರ್ಷದಂತೆ ಹೇಳಲಾಗುವ ಸಿದ್ಧಾಂತ ಶಿಖಾಮಣಿ ಜೊತೆಗೆ ಶ್ರೀ ವೀರಭದ್ರೇಶ್ವರ ಚರಿತ್ರೆ ಯನ್ನೂ ವಾಚಿಸಲು ನಿರ್ಧರಿಸಿದ್ದೇನೆ. ಶಾಸಕರಾದ ಜಿ.ಎಸ್. ಪಾಟೀಲರು ಧಾರ್ಮಿಕ ಕಾರ್ಯಗಳಿಗೆ ಸದಾ ಸಹಾಯಹಸ್ತ ಚಾಚುತ್ತಾರೆ. ಈ ಬಾರಿ ಅವರ ಪುತ್ರ ಮಿಥುನ ಪಾಟೀಲರು ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮೆರಗು ನೀಡಿದ್ದಾರೆ,” ಎಂದರು.



