ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಚುನಾವಣಾ ಬಾಂಡ್‌ಗಳ ಅಸ್ತಿತ್ವವನ್ನೇ ಕಿತ್ತೆಸೆದಿರುವ ಸರ್ವೋಚ್ಛ ನ್ಯಾಯಾಲಯ ಈ ಬಾಂಡ್‌ಗಳು ಅಸಂವಿಧಾನಿಕ ಮತ್ತು ಸಂವಿಧಾನ ಬಾಹಿರವಾಗಿರುವ ಈ ಯೋಜನೆ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ಕಾನೂನು, ನ್ಯಾಯ ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಅನಾಮಧೇಯ ನಿಧಿಯ ಮತ್ತು ಪರಸ್ಪರ ಕೊಡುಕೊಳ್ಳುವಿಕೆಯ ಕಾರ್ಪೋರೇಟ್ ವಲಯದಿಂದ ನಿಧಿ ಸಂಗ್ರಹಣೆ ಅತ್ಯಂತ ಅನೈತಿಕ ಕ್ರಮವಾಗಿದೆ. ದೇಣಿಗೆ ಹಣವನ್ನು ಆದಾಯ ತೆರಿಗೆ ಮತ್ತು ಜನತಾ ಪ್ರಾತಿನಿಧ್ಯ ಕಾಯಿದೆಯಿಂದ ಹೊರಗಿಟ್ಟು ಅಕ್ರಮ ಸಂಪಾದನೆಯನ್ನು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳುವ ಕುತಂತ್ರದ ಭಾಗವಾಗಿರುವ ಯೋಜನೆಯನ್ನು ಸರ್ವೋಚ್ಚ ನ್ಯಾಯಾಲಯ ಸ್ಥಗಿತಗೊಳಿಸಿರುವುದು ಮತ್ತು ಅವುಗಳನ್ನು ಅಸಿಂಧು ಎಂದು ಘೋಷಿಸಿರುವುದು ಅತ್ಯಂತ ಸಮಂಜಸವಾದ ಐತಿಹಾಸಿಕ ನಿರ್ಣಯವಾಗಿದೆ.
ಈ ಚುನಾವಣಾ ಬಾಂಡ್‌ಗಳ ಮೂಲಕ ಬಿ.ಜೆ.ಪಿ ಪಕ್ಷವೇ ಅತಿ ಹೆಚ್ಚು ಹಣ ಸಂಗ್ರಹಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಕ್ಷವಾಗಿರುವ ಬಿ.ಜೆ.ಪಿ ಯಾವ ಮೂಲದಿಂದ ಈ ಹಣ ಸಂಗ್ರಹಿಸಿದೆ ಎಂಬುದನ್ನು ಇ.ಡಿ.ಯವರು ತನಿಖೆ ನಡೆಸಬೇಕು. ಬಿ.ಜೆ.ಪಿ ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿದ ಈ ಅಕ್ರಮ ಹಣವನ್ನು ಚುನಾವಣಾ ಆಯೋಗ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು.
ದೇಶದಲ್ಲಿ ಅನೈತಿಕ ಸಂಪ್ರದಾಯವೊಂದನ್ನು ಶಾಸನಾತ್ಮಕವಾಗಿ ಜಾರಿಗೆ ತಂದ ಅಪಕೀರ್ತಿಯನ್ನು ಮತ್ತು ಇಂತಹ ಘೋರ ಅನೈತಿಕ ಕ್ರಮದ ಹೊಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊತ್ತುಕೊಳ್ಳಬೇಕು.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಉನ್ನತ ಸಂಪ್ರದಾಯಗಳನ್ನು ಮತ್ತು ಮೌಲ್ಯಗಳನ್ನು ಸಂರಕ್ಷಿಸುವ ಸಲುವಾಗಿ ಪ್ರಧಾನಮಂತ್ರಿ ಹುದ್ದೆಯನ್ನು ನರೇಂದ್ರ ಮೋದಿಯವರು ತಕ್ಷಣ ತ್ಯಜಿಸಿ ರಾಜಕೀಯ ವ್ಯವಸ್ಥೆಯಲ್ಲಿ ಸೂಕ್ತ ಮತ್ತು ನ್ಯಾಯಯುತ ಸಂಪ್ರದಾಯಕ್ಕೆ ನಾಂದಿ ಹಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.