ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಂತರು, ಶರಣರು, ಮಹಾತ್ಮರ ಜೀವನ ಚರಿತ್ರೆ ಬದುಕಿಗೆ ದಾರಿದೀಪವಾಗಿದ್ದು, ಅವರ ಜೀವನ ವೃತ್ತಾಂತ ಆಲಿಸುವುದರಿಂದ ಮನಸ್ಸಿನ ಕಲ್ಮಶಗಳು ಕಳೆಯುತ್ತವೆ ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರಮಹಾಸ್ವಾಮಿಗಳು ಹೇಳಿದರು.
ಅವರು ಶ್ರೀಮಠದ 46ನೇ ಜಾತ್ರಾ ಮಹೋತ್ಸವ ಮತ್ತು ಲಿಂ. ನಿರಂಜನ ಶ್ರೀಗಳ ಪುಣ್ಯಾರಾಧನೆ ಅಂಗವಾಗಿ ಮುಳುಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಪುರಾಣ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಂತರಂಗದಲ್ಲಿ ಪ್ರೀತಿ, ದಯೆ, ಕರುಣೆ, ದಾನ-ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳು ಒಡಮೂಡಲು ಮಹಾತ್ಮರ ಜೀವನ ಚರಿತ್ರೆ ಅರಿಯಬೇಕು. ಕತ್ತಲು ಕವಿದ ಬದುಕಿಗೆ ಬೆಳಕಿದ್ದಂತೆ. ಮಹಾತ್ಮ ಶ್ರೇಷ್ಠರಾದ ಮುಳುಗುಂದದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಚರಿತ್ರೆ ಸನ್ಮಾರ್ಗದ ದೀವಿಗೆಯಾಗಿದ್ದು, ಈ ಪುರಾಣ ಕಾರ್ಯದಲ್ಲಿ ಪಾಲ್ಗೊಂಡು ಕೆಲ ತತ್ವ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜ. 1ರಿಂದ ಪ್ರಾರಂಭಗೊಂಡಿರುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಹೂವಿನಶಿಗ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಕದಮನಹಳ್ಳಿಯ ಪಂಚಾಕ್ಷರಿ ಶಾಸ್ತಿçಗಳು ಪ್ರವಚನಗೈಯುತ್ತಿದ್ದು ಅನಿಲಕುಮಾರ ಮಠಪತಿ, ಬಾಲಾಜಿ ಸಂಗೀತ ಸೇವೆ ನೀಡುತ್ತಿದ್ದಾರೆ.