ಬೆಂಗಳೂರು: ಹಿಟ್ ಅಂಡ್ ರನ್ ಅಪಘಾತದಲ್ಲಿ ಡೆಲಿವರಿ ಬಾಯ್ ಒಬ್ಬರು ಸಾವನ್ನಪ್ಪಿರುವ ದುರ್ಘಟನೆ ಕೆಆರ್ ಪುರಂನ ಭಟ್ಟರಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ನೇಪಾಳ ಮೂಲದ ಸುರೇಂದರ್ ಬಹದ್ದೂರ್ (38) ಎಂದು ಗುರುತಿಸಲಾಗಿದೆ. ಸುರೇಂದರ್ ಕಳೆದ ಮೂರು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.
ಇಂದು ಬೆಳಗ್ಗೆ ಸುಮಾರು 3:30ರ ವೇಳೆಗೆ, ಸುರೇಂದರ್ ಡೆಲಿವರಿ ನೀಡಲು ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ, ವೇಗವಾಗಿ ಬಂದ ಕಾರೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಡಿಕ್ಕಿಯ ತೀವ್ರತೆಯಿಂದ ಸುರೇಂದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಹಿಟ್ ಅಂಡ್ ರನ್ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಸಗಿ ಪರಾರಿಯಾಗಿರುವ ಕಾರು ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.



