ವಿಜಯಸಾಕ್ಷಿ ಸುದ್ದಿ, ಗದಗ: ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ತೀವ್ರತರವಾದ ಐ.ಇ.ಸಿ ಪ್ರಚಾರಾಂದೋಲನ-2025ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿ.ಮೀ. ಮ್ಯಾರಾಥಾನ್ ಸ್ಪರ್ಧೆಯನ್ನು ಆಯೋಜಿಸಿದೆ. ಜಿಲ್ಲೆಯಲ್ಲಿ ಹೆಚ್.ಐ.ವಿ ಪ್ರಮಾಣ ಇಳಿಮುಖವಾಗಿದ್ದು, ವಿದ್ಯಾರ್ಥಿಗಳು ಹೆಚ್.ಐ.ವಿ ಏಡ್ಸ್ ಬಗ್ಗೆ ತಿಳಿದುಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು.
ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಐ.ಎಮ್.ಎ, ರೋಟರಿ ಸೆಂಟ್ರಲ್ ಗದಗ, ಲಾಯನ್ಸ್ ಕ್ಲಬ್ ಗದಗ-ಬೆಟಗೇರಿ, ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ, ರಕ್ಷಣೆ ಸಂಸ್ಥೆ, ಸೃಷ್ಟಿ ಸಂಕುಲ ಸಂಸ್ಥೆ, ಚೈತನ್ಯ ಸಂಸ್ಥೆ, ನವಚೇತನ ಸಂಸ್ಥೆ, ಗದಗ ಜಿಲ್ಲೆಯ ಎನ್.ಎಸ್.ಎಸ್ ಘಟಕಗಳು ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮ್ಯಾರಾಥಾನ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ. ಆರ್.ಎನ್. ಗೋಡಬೇಲೆ ಮಾತನಾಡಿ, ವಿದ್ಯಾರ್ಥಿಗಳು ಯೌವನದಲ್ಲಿ ತಮ್ಮ ಜೀವನವನ್ನು ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆಗಳನ್ನು ರೂಪಿಸಿಕೊಳ್ಳಲು ಕರೆ ನೀಡಿದರು.
ಡಾ. ಅರುಂಧತಿ ಕುಲಕರ್ಣಿ ಮಾತನಾಡಿ, ಹೆಚ್.ಐ.ವಿ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಜಿಲ್ಲೆಯ ಯುವ ಸಮುದಾಯ ಜಾಗೃತಿಯನ್ನು ಮೂಡಿಸಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರಲು ಶ್ರಮಿಸಬೇಕೆಂದು ತಿಳಿಸಿದರು.
ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷರಲ್ಲಿ ಪ್ರಥಮ ಸ್ಥಾನವನ್ನು ರಮೇಶ ಸಿಂಗಡಾನಕೇರಿ, ದ್ವಿತೀಯ ಸ್ಥಾನವನ್ನು ದೇವರಾಜ ದೊಡಮನಿ, ತೃತೀಯ ಸ್ಥಾನವನ್ನು ಅಶೋಕ ವಡ್ಡರ ಪಡೆದುಕೊಂಡರು. ವಿದ್ಯಾರ್ಥಿನಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ದ್ರಾಕ್ಷಾಯಿಣಿ ಕರ್ಣಿ, ದ್ವಿತೀಯ ಸ್ಥಾನವನ್ನು ಪ್ರೀತಿ ಬ.ಮುಗಳಿ, ತೃತೀಯ ಸ್ಥಾನವನ್ನು ಅಕ್ಷತಾ ಕಲಗುಡಿ ಪಡೆದುಕೊಂಡರು.
ಕ್ರೀಡಾ ಇಲಾಖೆಯ ತರಬೇತುದಾರರಾದ ಮಂಜುನಾಥ ಬಾಗಡೆ, ವಿದ್ಯಾ ಕುಲಕರ್ಣಿ, ಗದಗ ತಾಲೂಕಿನ ಆರೋಗ್ಯ ನೀರಿಕ್ಷಣಾಧಿಕಾರಿಗಳ ಸಂಘದ ಪದಾಧಿಕಾರಿಗಳು, ಜಿಲ್ಲೆಯ ರೆಡ್ ರಿಬ್ಬನ್ ಹಾಗೂ ಎನ್.ಎಸ್.ಎಸ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ರೂಪಸೇನ್ ಚವ್ಹಾಣ, ಸಿದ್ದಪ್ಪ ಲಿಂಗದಾಳ, ಬಸವರಾಜ ಹಿರೇಹಾಳ, ಗುರುರಾಜ ಕೋಟ್ಯಾಳ, ಗಣೇಶ ಬಾಗಡೆ, ಪ್ರವೀಣ ರಾಮಗಿರಿ, ಜಿಲ್ಲೆಯ ಎಲ್ಲ ಐಸಿಟಿಸಿ, ಎ.ಆರ್.ಟಿ ಡ್ಯಾಪ್ಕೂ ಸಿಬ್ಬಂದಿ, ಆರೋಗ್ಯ, ಶಿಕ್ಷಣ ಇಲಾಖೆಯ ಸಿಬ್ಬಂದಿ, ರಕ್ಷಣೆ ಸಂಸ್ಥೆಯ ಹಜರತ್‌ಬಿ ಮತ್ತು ಸಿಬ್ಬಂದಿ, ಚೈತನ್ಯ ಸಂಸ್ಥೆಯ ಸುನೀಲ್ ಮತ್ತು ಸಿಬ್ಬಂದಿ, ನವಚೇತನ ಸಂಸ್ಥೆಯ ಭಾರತಿ ಹಾಗೂ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.
ಜೈ ಭೀಮ ಗೀಗೀ ಜಾನಪದ ಕಲಾ ತಂಡ ನೀಲಗುಂದ ಇವರು ಜನಪದ ಗೀತೆಗಳ ಮೂಲಕ ಜಾಗೃತಿ ಮೂಡಿಸಿದರು. ಬಸವರಾಜ ಲಾಳಗಟ್ಟಿ ಸ್ವಾಗತಿಸಿದರು. ರಾಜೇಂದ್ರ ಗಡಾದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹೆಚ್.ಐ.ವಿ ಏಡ್ಸ್ ಮಾರಣಾಂತಿಕ ಖಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಯುವಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮ್ಯಾರಾಥಾನ್ ಸ್ಪರ್ಧೆ ಆಯೋಜಿಸಲಾಗಿದೆ.
– ಡಾ. ಅರುಂಧತಿ ಕುಲಕರ್ಣಿ.



