ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪರಸ್ಪರ ಪ್ರೀತಿ-ಸ್ನೇಹ, ಬಾಂಧವ್ಯ-ಸೌಹಾರ್ದತೆ ಬೆಸೆಯುವ ರಂಗಿನೋಕುಳಿ ಹಬ್ಬ ಮಂಗಳವಾರ ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಡಿಜೆ ಅಬ್ಬರದ ಸಂಗೀತಕ್ಕೆ ಯುವಕರು, ಮಕ್ಕಳು ರೇನ್ ಡ್ಯಾನ್ಸ್ ಮೂಲಕ ಬಣ್ಣದ ಹಬ್ಬದಲ್ಲಿ ಮಿಂದೆದ್ದರು. ಬೆಳ್ಳಂಬೆಳಿಗ್ಗೆಯೇ ಪುಟ್ಟ ಮಕ್ಕಳು ಹೆಣ್ಣು-ಗಂಡು ಬೇಧಬಾವವಿಲ್ಲದೇ ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಹಚ್ಚುವ ಮೂಲಕ ರಂಗಿನಾಟಕ್ಕೆ ರಂಗು ಮೂಡಿಸಿದರು.
ಪಟ್ಟಣದ ಹಳ್ಳದಕೇರಿ ಓಣಿಯ ಯುವಕ ಸಂಘದವರು ಟ್ರ್ಯಾಕ್ಟರ್‌ನಲ್ಲಿ ಪಕ್ಷಿಯ ಆಕೃತಿಯಲ್ಲಿ ರತಿ-ಕಾಮಣ್ಣನ ಮೂರ್ತಿಯನ್ನಿರಿಸಿ ಡಿಜೆ ಅಬ್ಬರದ ಕುಣಿತದೊಂದಿಗೆ ಮೆರವಣಿಗೆ ಮಾಡಿದರು. ಮೆರವಣಿಗೆಗೆ ಚಾಲನೆ ನೀಡಿ ಪಿಎಸ್‌ಐ ನಾಗರಾಜ ಗಡಾದ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ಹೋಳಿ ಹಬ್ಬ ಭಾರತದ ಸಂಸ್ಕೃತಿಯ ಪ್ರತೀಕ. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ವಿವಿಧ ಜಾತಿ, ಧರ್ಮ, ಬಡವ-ಬಲ್ಲಿದ, ಮೇಲು-ಕೀಳು, ಹಿರಿ-ಕಿರಿಯರನ್ನು ಸೇರಿಸಿ ಪರಸ್ಪರರಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯ, ಸೌಹಾರ್ದತೆ ಬೆಸೆಯುವ ಶಕ್ತಿ ಹೋಳಿ ಹಬ್ಬಕ್ಕಿದೆ.
ಈ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ. ಪರಸ್ಪರಲ್ಲಿನ ದ್ವೇಷ ಮರೆಸಿ, ಸಂಬಂಧ ಬೆಸೆಯುವ ಮತ್ತು ನಗಿಸಿ-ಕುಣಿಸುವ ಶ್ರೇಷ್ಠತೆಯ ಹಬ್ಬವಾಗಿದೆ. ಪ್ರಸ್ತುತ ಡಿಜೆ ಅಬ್ಬರ, ಸಂಸ್ಕಾರ ರಹಿತ ವರ್ತನೆ, ಸರಾಯಿ ಕುಡಿತದಿಂದ ಹಬ್ಬದ ಆಚರಣೆ ದಾರಿ ತಪ್ಪದಿರಲಿ ಎಂದು ಮನವಿ ಮಾಡಿದರು. ಈ ವೇಳೆ ಪುರಸಬೆ ಮಾಜಿ ಅಧ್ಯಕ್ಷೆ ಜಯಕ್ಕ ಅಂದಲಗಿ, ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ಶಿವು ಕಟಗಿ, ನವೀನ ಬೆಳ್ಳಟ್ಟಿ, ಅನಿಲ ಮುಳಗುಂದ, ಶಕ್ತಿ ಕತ್ತಿ, ಬಸವರಾಜ ಚಕ್ರಸಾಲಿ, ಮಂಜುನಾಥ ಗೊರವರ ಮುಂತಾದವರಿದ್ದರು.
ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ಹಿಂದೂ ಸೇವಾ ಪ್ರತಿಷ್ಠಾನದ ಯುವಕರು ಮತ್ತು ಸೊಪ್ಪಿನಕೇರಿ ಓಣಿಯ ಸತಾನತ ಹಿಂದೂ ಯುವಕ ಮಂಡಳದಿಂದ ಯುವಕರು ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಿದ್ದರು. ಬಣ್ಣದ ಬಟ್ಟೆಯ ಪೆಂಡಾಲ್‌ನಲ್ಲಿ ಕೃತಕ ಮಳೆ ಸಿಂಚನ ಸೃಷ್ಟಿಸಿ ರಂಗಿನೋಕುಳಿ ಆಡಿದರು. ಬಿಸಿಲಿನ ಬೇಗೆಗೆ ರೇನ್ ಡ್ಯಾನ್ಸ್ ದೇಹ-ಮನಸ್ಸಿಗೆ ಮುದ ನೀಡಿತು. ಚಿತ್ರಕಲಾವಿದ ಪ್ರವೀಣ ಗಾಯಕರ ತಮ್ಮ ಕಲಾ ನೈಪುಣ್ಯತೆಯ ಮೂಲಕ ಯುವಕರು, ಮಕ್ಕಳ ಮುಖದಲ್ಲಿ ರಂಗು ತಂದರು.
ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳು ಗೆಳತಿಯರ ಮನೆಗೆ ಹೋಗಿ ಬಣ್ಣ ಹಚ್ಚಿ ಸೆಲ್ಪಿಯೊಂದಿಗೆ ಖುಷಿಪಟ್ಟರು. ಸಣ್ಣ ಹುಡುಗರು ಅಣುಕು ಶವಯಾತ್ರೆ, ಹಲಗೆ ಬಾರಿಸುತ್ತಾ ಕುಣಿದು ಕುಪ್ಪಳಿಸಿದರು. ಪಟ್ಟಣದ ಬಸ್ತಿಬಣ, ಪೇಠಬಣ, ವಿನಾಯಕ ನಗರ, ರಂಭಾಪುರಿ ನಗರ, ಸರಾಫ ಬಜಾರ, ಅಂಬೇಡ್ಕರ ನಗರ, ಇಂದಿರಾನಗರ, ಡೋರ್ ಗಲ್ಲಿ, ಹುಲಗೇರಿಬಣ ಸೇರಿ ಹಲವೆಡೆ ಪ್ರತಿಷ್ಠಾಪಿಸಿದ್ದ ರತಿ-ಮನ್ಮಥರ ಮತ್ತು ಹುಲ್ಲುಗಾಮನ ಆಕೃತಿ ಮುಂದೆ ಬಣ್ಣ ಎರಚಿ ಹಲಗೆಯ ನಾದಕ್ಕೆ ಕುಣಿದು ಕೇಕೆ ಹಾಕಿ ಸಂಭ್ರಮಿಸಿದರು. ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಆವರಣದಲ್ಲಿ ನಿತ್ಯ ಯೋಗಾಭ್ಯಾಸ ಮಾಡುತ್ತಿರುವ ಯೋಗ ಸಮಿತಿ ಸದಸ್ಯರು ವಿಶೇಷವಾಗಿ ಬಣ್ಣದ ಹಬ್ಬ ಆಚರಿಸಿದರು.
ಈ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಯಿದ್ದುದರಿಂದ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆ ತಲುಪಿಸುವ ಜವಾಬ್ದಾರಿಯನ್ನೂ ಪೊಲೀಸರು ನಿರ್ವಹಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ಪೊಲೀಸ್ ಪಡೆ ಸೂಕ್ತ ಬಂದೋಬಸ್ತ್ ನಿರ್ವಹಿಸಿದರು.