ವಿಜಯಸಾಕ್ಷಿ : ಶಾಲಾ ವಾರ್ಷಿಕ ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂತು. ಎಪ್ರೀಲ್ ಮತ್ತು ಮೇ ಎರಡು ತಿಂಗಳು ನಾವಿನ್ನು ಸ್ವತಂತ್ರರು ಎಂದು ಬಾನಾಡಿಯಂತೆ ಸ್ವಚ್ಛಂದವಾಗಿ ವಿಹರಿಸುಲು ಹಾಗ ಕುಣಿದು ಕುಪ್ಪಳಿಸುವ ಮಕ್ಕಳು ಒಂದು ಕಡೆ ತಯಾರಾದರೆ, ಮತ್ತೊಂದೆಡೆ ಯಾಕಾದರೂ ರಜೆ ಕೊಟ್ರಪ್ಪಾ! ಮಕ್ಕಳು ನಮ್ಮ ತಲೆ ತಿನ್ನುತ್ತಾರೆ, ಮಕ್ಕಳನ್ನು ಹಿಡಿಯುವುದೇ ಒಂದು ತಲೆನೋವಾಗುತ್ತೆ ಎಂದು ತಾಯಂದಿರು ಮಾತಾಡುವುದುಂಟು. ಹಾಗಾದ್ರೆ, ರಜಾ ಹೇಗೆ ಕಳಿಯೋದು ಅಂತಿರಾ? ನಾ ಹೇಳಿದಂತೆೆ ನೀವು ಮಾಡಿದರೆ ನಿಮ್ಮ ರಜಾ ದಿನದಲ್ಲಿ ಹೊಸದೊಂದು ಅನುಭವ ಸಿಗುತ್ತದೆ, ಜೊತೆಯಲ್ಲೇ ಮಜಾನು ಸಿಗುತ್ತೆ.
ಹೊಸ ಚೈತನ್ಯವನ್ನು ಮೂಡಿಸುವ ರಜೆಯನ್ನು ಹೆತ್ತವರ ಕಾರ್ಯಕ್ಕೆ ತೊಂದರೆ ಆಗದಂತೆ ಮಕ್ಕಳಾದ ತಮಗೂ ಬೇಜಾರಾಗದಂತೆ, ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವುದು ಜಾಣತನ. ಸರಿಯಾದ ಕ್ರಮದಲ್ಲಿ ಸರಿಯಾದ ಮಾರ್ಗದಲ್ಲಿ ಮುನ್ನಡೆದರೆ ಯಶಸ್ಸು ತಮ್ಮದಾಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ರಜಾ ಅವಧಿಯನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು. ಹೇಗೆ ಅಂತೀರಾ? ಇಲ್ಲಿದೆ ಕೆಲವೊಂದು ಟಿಪ್ಸ್.
* ರೈತರ ಮಕ್ಕಳಾಗಿದ್ದರೆ, ಮನೆಪಾಠ ಮುಗಿದ ಮೇಲೆ ತಂದೆ- ತಾಯಿಗಳಿಗೆ ಹೊಲದ ಕೆಲಸಕ್ಕೆ ಸಹಾಯ ಮಾಡಿ. ಪಾಲಕರೂ ಖುಷಿಯಾಗುತ್ತಾರೆ, ನಿಮಗೂ ಸಮಯದ ಸದುಪಯೋಗವಾಗುತ್ತದೆ.
* ಪಟ್ಟಣದಲ್ಲಾದರೆ, ಮನೆಯ ಮುಂದೆ ಕೈತೋಟ ಮಾಡಿರುತ್ತಾರೆ. ಅದರಲ್ಲಿ ಮುಂಜಾನೆ ಹಾಗೂ ಸಮಯದಲ್ಲಿ ನೀರು ಹಾಕುವುದು, ಕಳೆ ಕೀಳುವುದು ಮಾಡಿದರೆ ನಿಮಗೂ ಪ್ರಕೃತಿಯ ಮೇಲೆ ಕಾಳಜಿ ಉಂಟಾಗುತ್ತದೆ. ನಿಮ್ಮನ್ನು ನೋಡಿ ಹೆತ್ತವರಿಗೂ ಸಂತಸವಾಗುತ್ತದೆ.
* ಶಾಲಾ ದಿನಗಳಲ್ಲಿ ಸಂಬಂಧಿಕರ ಊರುಗಳಿಗೆ ಹೋಗಲು ಆಗಿರುವುದಿಲ್ಲ. ಅಜ್ಜ-ಅಜ್ಜಿಯರ ಜೊತೆ ಹರಟೆ ಹೊಡೆಯಲೂ ಆಗಿರುವುದಿಲ್ಲ. ಸ್ವಲ್ಪ ದಿನದ ಮಟ್ಟಿಗೆ ಕುಟುಂಬ ಸಮೇತ ಅಜ್ಜಿ ಊರಿಗೆ ಹೋಗಿ. ಅವರೊಂದಿಗೆ ಪ್ರೀತಿ-ವಿಶ್ವಸದಿಂದ ನಲಿಯಿರಿ. ಅವಿಭಕ್ತ ಕುಟುಂಬದಲ್ಲಿ ಸೇರಿದರೆ ಎಷ್ಟೆಲ್ಲಾ ಸಂತಸ ಸಿಗುತ್ತದೆ ಎಂಬುದನ್ನು ತಿಳಿಯಬಹುದು.
* ಹಳ್ಳಿಗೆ ತೆರಳಿ ಅಲ್ಲಿ ಚಿಕ್ಕಪ್ಪ, ದೊಡ್ಡಪ್ಪನೊಂದಿಗೆ ಹೊಲ-ಗದ್ದೆಗಳಿಗೆ ಹೋಗಿ ಅಲ್ಲಿರುವ ಬೆಳೆಗಳ ಬಗ್ಗೆ ಮಾಹಿತಿ ಪಡೆಯಿರಿ.
* ಸಮಯ ಸಿಕ್ಕರೆ ಸಂಗೀತ, ಸಾಹಿತ್ಯ ರಚನೆ, ರಂಗ ತರಬೇತಿ, ಯೋಗ, ಕ್ರೀಡಾ ತರಬೇತಿ ನೀಡುವ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ. ಮನಸ್ಸಿಗೆ ನೆಮ್ಮದಿಯ ಜೊತೆಗೆ ಹೊಸದನ್ನು ಕಲಿತಂತೆ ಆಗುತ್ತದೆ.
* ನಿಮಗೆ ಕಠಿಣವೆನಿಸುವ ವಿಷಯಗಳ ಕೋಚಿಂಗ್ ತೆಗೆದುಕೊಳ್ಳಿ. ಮುಂದೆ ನಿಮ್ಮ ಶಾಲೆಯಲ್ಲಿ ಕಲಿಯಲು ಸುಲಭವಾಗುತ್ತದೆ.
ಮಕ್ಕಳು ರಜಾ ದಿನ ಏನೆಲ್ಲಾ ಮಾಡಬಾರದು?:
* ಅನಾವಶ್ಯಕವಾಗಿ ಹೋಗಬಾರದ ಜಾಗಕ್ಕೆ ಹೋಗಬಾರದು. ಅದು ಅಪಾಯಕ್ಕೆ ಎಡೆಮಾಡಿಕೊಡುತ್ತದೆ.
* ಗೆಳೆಯರ ಜೊತೆ ಸೇರಿ ದುಶ್ಚಟಗಳಿಗೆ ದಾಸರಾಗದಿರಿ. ಹೆತ್ತವರಿಗೆ ಹೊರೆಯಾಗದಿರಿ.
* ಮನೆಯಲ್ಲಿ ಹಠ ಮಾಡುತ್ತಾ, ದಾಂದಲೆ ಮಡುತ್ತಾ, ತಂದೆ-ತಾಯಿಯರಿಗೆ ಬೇಸರ ಹುಟ್ಟಿಸದಿರಿ.
ತಂದೆ ತಾಯಿಯ ಜವಾಬ್ದಾರಿ ಏನು?:
* ಮಕ್ಕಳಿಗೆ ಒತ್ತಡದ ಕಾರ್ಯಕ್ಕೆ ಹಚ್ಚದಿರಿ. ಬರಿಯ ಹೋಂವರ್ಕ್ ಅಂತ ಹೇಳಿ ಅವರಿಗೆ ಹೊರೆ ಮಾಡದಿರಿ.
* ಶಾಲಾ ಹೋಂ ವರ್ಕ್ ಇದ್ದರೂ ಮಕ್ಕಳಿಗೆ ಪ್ರೀತಿಯಿಂದ ಮಾತನಾಡಿಸುತ್ತಾ ಅವರು ಸಂತಸವಾಗಿದ್ದಾರೆ ಎಂದಾಗ ಬರೆಯಲು ಹೇಳಿ.
* ಮಕ್ಕಳು ಪ್ರಾಣಿ-ಪಕ್ಷಿಗಳನ್ನು ಬರಿಯ ಟಿ.ವಿಯಲ್ಲಿ ನೋಡಿರುತ್ತಾರೆ. ಅವರಿಗೆ ನೈಜ ಪ್ರಾಣಿ-ಪಕ್ಷಿಗಳನ್ನು ತೋರಿಸಲು ಪ್ರಾಣಿ ಸಂಗ್ರಾಹಾಲಯಕ್ಕೆ ಕರೆದುಕೊಂಡು ಹೋಗಿ ತೋರಿಸಿ.
* ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿಸಿ, ಮಕ್ಕಳಲ್ಲಿ ದೇವರ ಮೇಲೆ ಭಕ್ತಿ ಭಾವ ಹುಟ್ಟುವಂತೆ ಮಾಡಿ.
* ಒಳ್ಳೆಯ ಸಿನಿಮಾ ಹಾಗೂ ಸರ್ಕಸ್‌ನಂತಹ ಮನರಂಜನಾ ಕಾರ್ಯಕ್ರಮಗಳನ್ನು ತೋರಿಸಿ. ಅವರೊಂದಿಗೆ ನೀವು ಬೆರೆತಾಗ ಹೆತ್ತವರ ಪ್ರೀತಿ ಅವರಿಗೆ ಇನ್ನಷ್ಟು ಸಿಕ್ಕಹಾಗೆ ಆಗುತ್ತದೆ.
* ಆಧ್ಯಾತ್ಮಿಕ ಮನೋಭಾವ ಬೆಳೆಸಲು ಯೋಗ ಹಾಗೂ ಧ್ಯಾನ ಮಾಡುವ ಕೇಂದ್ರಕ್ಕೆ ಸೇರಿಸಿ.
* ಒಳ್ಳೆಯ ಪಠ್ಯೇತರ ಚಟುವಟಿಕೆ ಮಾಡಿಸಿ. ಇದರಿಂದ ಮಕ್ಕಳಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ.
* ಬಿಸಿಲಿನ ತಾಪ ಹೆಚ್ಚಾಗುತಿರುವುದರಿಂದ ಮಕ್ಕಳನ್ನು ಹೊರಗಡೆ ಹೆಚ್ಚು ಹೊತ್ತು ಹೋಗಲು ಬಿಡದಿರಿ.
* ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ, ಹೆಚ್ಚು ನೀರು ಕುಡಿಯಲು ಸಲಹೆ ಕೊಡಿ.
ನೀವು ಇಷ್ಟೇಲ್ಲಾ ನಿಯಮಗಳನ್ನು ಪಾಲನೆ ಮಾಡಿ, ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಿ. ಒಳ್ಳೆಯ ಕಾರ್ಯ ಮಾಡಿ, ರಜಾ ದಿನವನ್ನು ಮಜಾ ದಿನವನ್ನಾಗಿ ಆನಂದಿಸಿ. ಇದರೊಂದಿಗೆ ಇನ್ನೂ ತಂದೆ-ತಾಯಿಯರ ಸಲಹೆಯಂತೆ ರಜಾ ದಿನವನ್ನು ಕಳೆಯಿರಿ.
– ಎಸ್.ಕೆ. ಆಡಿನ.
ಶಿಕ್ಷಕರು, ಮಾಲಗಿತ್ತಿ.