ಸಿನಿಮಾ ಟಿಕೆಟ್ ದರ ಇಳಿಕೆ: ಹೈಕೋರ್ಟ್ ಮೆಟ್ಟಿಲೇರಿದ ಹೊಂಬಾಳೆ ಫಿಲ್ಮ್ಸ್

0
Spread the love

ಇತ್ತೀಚೆಗಷ್ಟೆ ರಾಜ್ಯ ಸರ್ಕಾರವು ಸಿನಿಮಾದ ಟಿಕೆಟ್ ದರಗಳನ್ನು ಇಳಿಸಿ ಆದೇಶ ಹೊರಡಿಸಿತ್ತು. ಸಿಂಗಲ್‌ ಸ್ಕ್ರೀನ್‌, ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳು 200 ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಸಿನಿಮಾ ಟಿಕೆಟ್​ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕಟ್ಟು ನಿಟ್ಟಾಗಿ ಆದೇಶ ಹೊರಡಿಸಿದೆ. ಕಾಂತಾರ 1, ಡೆವಿಲ್, ಮಾರ್ಕ್, ಕೆಡಿ, 45 ಸೇರಿದಂತೆ ಕನ್ನಡದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿರುವ ಹೊತ್ತಲ್ಲೇ ಸರ್ಕಾರದ ಈ ನಿರ್ಧಾರ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ.

Advertisement

ರಾಜ್ಯ ಸರ್ಕಾರದ ಈ ಆದೇಶವನ್ನು ಸಿನಿಮಾ ಪ್ರೇಮಿಗಳು, ಫಿಲಂ ಚೇಂಬರ್ ಮತ್ತು ಕೆಲ ಹಿರಿಯ ಕಲಾವಿದರು ಸ್ವಾಗತಿಸಿದ್ದರು. ಆದರೆ ಖ್ಯಾತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್, ವಿಕೆ ಫಿಲಮ್ಸ್ ಮತ್ತು ಮಲ್ಟಿಪ್ಲೆಕ್ಸ್​​ನವರು ವಿರೋಧ ವ್ಯಕ್ತಪಡಿಸಿ, ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್​​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು.

ಇಂದು ಹೈಕೋರ್ಟ್​​ನಲ್ಲಿ ಈ ಬಗ್ಗೆ ವಾದ-ಪ್ರತಿವಾದಗಳು ನಡೆದಿದ್ದು, ಮಲ್ಟಿಪ್ಲೆಕ್ಸ್​ಗಳ ಪರ ಹಿರಿಯ ವಕೀಲ ಮುಖುಲ್ ರೊಹ್ಟಗಿ ಹಾಗೂ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ‘ಮಲ್ಟಿಪ್ಲೆಕ್ಸ್​ ಸೇರಿದಂತೆ ಚಿತ್ರಮಂದಿರಗಳಿಗೆ 200 ರೂಪಾಯಿ ನಿಗದಿಪಡಿಸಿದೆ. ಸರ್ಕಾರ ಏಕಪಕ್ಷೀಯವಾಗಿ ದರ ನಿಗದಿ ಮಾಡಿ ಆದೇಶಿಸಿದೆ, ಸರ್ಕಾರದ ನಿಯಮ ಕಾನೂನುಬಾಹಿರವಾಗಿದೆ ಹಾಗೂ ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಯಾಗಿದೆ. 2017ರಲ್ಲಿಯೂ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿತ್ತು, 2017ರ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು, ಟಿಕೆಟ್ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟದ್ದು. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ, ಅಲ್ಲದೆ ಸಿನಿಮಾ ಹಾಲ್​ಗಳನ್ನು ನಿರ್ಮಿಸಲು ಕೋಟ್ಯಂತರ ಹಣ ವ್ಯಯಿಸಲಾಗಿದೆ. ಕಡಿಮೆ ಸೀಟುಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ, ಸೌಲಭ್ಯ ಒದಗಿಸಿರುವ ಸಂಸ್ಥೆಗಳಿಗೆ ದರ ನಿಗದಿ ಸರಿಯಲ್ಲ ವಾದ ಮಂಡಿಸಿದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಎಎಜಿ ಇಸ್ಮಾಯಿಲ್ ಜಬೀವುಲ್ಲಾ, ‘ಬಜೆಟ್‌ನಲ್ಲೇ ಸಿನಿಮಾ ಟಿಕೆಟ್ ದರ ಮಿತಿ ಬಗ್ಗೆ ಘೋಷಿಸಲಾಗಿತ್ತು, ಕರಡು ಅಧಿಸೂಚನೆಗೆ ಆಕ್ಷೇಪಣೆ ಪರಿಗಣಿಸಿ ತೀರ್ಮಾನಿಸಲಾಗಿದೆ. ಸರ್ಕಾರಕ್ಕೆ ಟಿಕೆಟ್ ದರ ನಿಗದಿಪಡಿಸುವ ಅಧಿಕಾರವಿದೆ’ ಎಂದು ವಾದಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ವಕೀಲ ವಿ.ಲಕ್ಷ್ಮೀನಾರಾಯಣ್ ವಾದ ಮಂಡಿಸಿ, ‘ವಾಣಿಜ್ಯ ಮಂಡಳಿಯ ಮನವಿಯ ಮೇರೆ ಸರ್ಕಾರವು ಟಿಕೆಟ್ ದರಗಳನ್ನು ಕಡಿಮೆಗೊಳಿಸಿದೆ’ ಎಂದರು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾ.ರವಿ ವಿ. ಹೊಸಮನಿ ಅವರಿದ್ದ ಪೀಠ, ಆದೇಶವನ್ನು ಕಾಯ್ದಿರಿಸಿದೆ.


Spread the love

LEAVE A REPLY

Please enter your comment!
Please enter your name here