ಭಾರತ ಆಧ್ಯಾತ್ಮದ ತವರೂರು: ಶ್ರೀ ರಂಭಾಪುರಿ ಜಗದ್ಗುರುಗಳು

0
??????????????
Spread the love

ವಿಜಯಸಾಕ್ಷಿ ಸುದ್ದಿ, ಅರಸೀಕೆರೆ: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಜನಮನದ ಮೇಲೆ ಹಬ್ಬಗಳು ಅಗಾಧ ಪರಿಣಾಮವನ್ನು ಉಂಟುಮಾಡುತ್ತವೆ. ಬತ್ತಿ ಬಳಲಿರುವ ಮನಸ್ಸಿಗೆ ಹಬ್ಬಗಳು ಹೊಸ ಉತ್ಸಾಹ ಮತ್ತು ಸ್ಫೂರ್ತಿಯನ್ನು ತರುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ನಗರದ ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಯಿಂದ ಸಂಘಟಿಸಿದ 84ನೇ ವರ್ಷದ ಗಜಾನನೋತ್ಸವದ ಅಂಗವಾಗಿ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಭಾರತ ಆಧ್ಯಾತ್ಮದ ತವರೂರು. ಇಲ್ಲಿರುವಷ್ಟು ದೇವಾಲಯಗಳು ಬೇರೆಲ್ಲಿಯೂ ಇಲ್ಲ. ಎಲ್ಲ ಹಬ್ಬಗಳ ಗುರಿ ಸಮಾಜದಲಿ ಶಾಂತಿ, ಸಾಮರಸ್ಯ ಮತ್ತು ಸಂಘಟನೆ ಉಂಟು ಮಾಡುವುದೇ ಆಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಗಂಗಾಧರ ಟಿಳಕರು ಸಾರ್ವಜನಿಕ ಗಣೇಶೋತ್ಸವ ನೆರವೇರಿಸುವುದರ ಮೂಲಕ ಎಲ್ಲರನ್ನು ಒಗ್ಗೂಡಿಸುವ ಮಹತ್ಕಾರ್ಯ ಮಾಡಿದರು. ಹಬ್ಬಗಳ ಹಿಂದಿರುವ ತಾತ್ವಿಕ ಚಿಂತನಗಳನ್ನು ಅರಿತು ಬಾಳುವುದು ಎಲ್ಲರ ಗುರಿಯಾಗಬೇಕಾಗಿದೆ ಎಂದರು.

ಶಾಸಕ ಕೆ.ಎಂ. ಶಿವಲಿಂಗೇಗೌಡರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾನವ ಜೀವನದ ಉನ್ನತಿಗೆ ಮತ್ತು ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಮುಖ್ಯ. ವಿಘ್ನ ವಿನಾಶಕನಾದ ಗಣಪತಿ ಎಲ್ಲರೂ ಪೂಜಿಸುವ ದೈವ. ಗಣಪತಿಯ ಬುದ್ಧಿಶಕ್ತಿ, ದೂರದೃಷ್ಟಿ ಮತ್ತು ಲೋಕಾನುಗ್ರಹ ಚಿಂತನೆ ನಮ್ಮೆಲ್ಲರ ಬಾಳಿನಲ್ಲಿ ಬೆಳಕು ಮೂಡಿಸಲೆಂದರು.

ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ ಮತ್ತು ಜಿ.ಎಸ್. ಪರಮೇಶ್ವರಪ್ಪ ನುಡಿ ನಮನ ಸಲ್ಲಿಸಿದರು. ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ರವೀಂದ್ರನಾಥ, ಕಾರ್ಯದರ್ಶಿ ವೆಂಕಟೇಶ ಬಾಬು, ಖಜಾಂಚಿ ನಾಗಭೂಷಣ ಮುಂತಾದವರಿದ್ದರು. ಅರಸೀಕೆರೆಯ ಬಸವರಾಜು (ಮಂಡಿ), ಗೀತಾ ಮತ್ತು ಮಕ್ಕಳು ದಾಸೋಹ ಸೇವೆ ಸಲ್ಲಿಸಿದರು.

ನೇತೃತ್ವ ವಹಿಸಿದ ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಎಲ್ಲ ಭೌತಿಕ ಸಂಪನ್ಮೂಲ ಹೊಂದಿದ್ದರೂ ಮನುಷ್ಯನಿಗೆ ಮಾನಸಿಕ ಶಾಂತಿ, ನೆಮ್ಮದಿಯಿಲ್ಲ. ಸುಖ-ಶಾಂತಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ. ಅವರವರ ಧರ್ಮ ಅವರವರು ಆಚರಿಸಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಬೆಳೆಸಿಕೊಂಡು ಬರಬೇಕೆಂದರು.


Spread the love

LEAVE A REPLY

Please enter your comment!
Please enter your name here