ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಇ-ಕೆವೈಸಿ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ತಾ.ಪಂ ಇಓ ವಿಶ್ವನಾಥ ಹೊಸಮನಿ ಕೊರ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬೆಣ್ಣಿಹಳ್ಳಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ನಿರ್ವಹಿಸಿದರು.
ನರೇಗಾ ಯೋಜನೆಯ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡರೆ ಕೂಲಿ ಪಾವತಿಗೆ ವೇಗ ಸಿಗಲಿದೆ. ಈ ಪ್ರಕ್ರಿಯೆಯಲ್ಲಿ ಫೇಸ್ ಅಥೆಂಟಿಕೇಶನ್ ಮೂಲಕ ಮಾಹಿತಿಯನ್ನು ನಿಖರವಾಗಿ ದಾಖಲಿಸಬಹುದು. ಕಾಮಗಾರಿ ನಂತರ ಕೂಲಿಕಾರರ ಫೋಟೊ ಮತ್ತವರ ಆಧಾರ್ ಸಂಖ್ಯೆಯೊಡಿಗೆ ಹಾಜರಾತಿ ದೃಢೀಕರಣವು ನಡೆಯಲಿದೆ.
ಎನ್ ಎಂಎಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಇ-ಕೆವೈಸಿ ಪ್ರಕ್ರಿಯೆ ನರೇಗಾ ಕೂಲಿಕಾರರಿಗೆ ಕಡ್ಡಾಯವಾಗಿದ್ದು, ಮುಂಡರಗಿ ತಾಲೂಕಿನಲ್ಲಿ ಈ ಪ್ರಕ್ರಿಯೆ ಜಾರಿಯಲ್ಲಿದೆ. ತೀವ್ರತರದಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ತಾ.ಪಂ ಇಓ ವಿಶ್ವನಾಥ ಅವರು, ಬೆಣ್ಣಿಹಳ್ಳಿ ಗ್ರಾಮದ ನರೇಗಾ ಕೂಲಿಕಾರರ ಮನೆಗೆ ಭೇಟಿ ನೀಡಿ ಖುದ್ದು ತಾವೇ ಮೊಬೈಲ್ ಮೂಲಕ ಪ್ರಕ್ರಿಯೆಯನ್ನು ನಿರ್ವಹಿಸಿದರು.
ನರೇಗಾ ಯೋಜನೆ ಮೂಲಕ ಗ್ರಾಮೀಣ ಜನರಿಗೆ, ಕೂಲಿಕಾರರಿಗೆ 100 ದಿನಗಳ ಉದ್ಯೋಗ ಖಾತ್ರಿಯಾಗಿದ್ದು, ಪಾರದರ್ಶಕತೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಜೊತೆಗೆ ಪಾರದರ್ಶಕ ಹಾಜರಾತಿಗೆ ಇ-ಕೆವೈಸಿ ವಿಧಾನ ವರದಾನವಾಗಿದೆ.