ಗದಗ: ರಸ್ತೆಯಲ್ಲಿ 10ರೂ ಸಿಕ್ಕರೆ ಸಾಕು ಎತ್ತಿ ಜೇಬಿಗೆ ಇಳಿಸುವ ಈಗಿನ ಕಾಲದಲ್ಲಿ 50 ಸಾವಿರ ಹಾಗೂ ಮಹತ್ವದ ಕಾಗದ ಪತ್ರಗಳಿದ್ದ ಬ್ಯಾಗ್ ಅನ್ನು ವಾರಸುದಾರರಿಗೆ ಹಿಂದಿರುಗಿಸುವಲ್ಲಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸ್ ಇಲಾಖೆ “ಸಮುದಾಯ ರಕ್ಷಕ ” ಪ್ರಶಸ್ತಿ ನೀಡಿ ಗೌರವಿಸಿದೆ.
ಸಯ್ಯದ್ ಹುಸೇನ್ ಇಮಾಮುದ್ದೀನ್ ಮುಲ್ಲಾ ಅವರೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರಿಂದ ಗೌರವ ಪಡೆದ ಆಟೋ ಚಾಲಕ. ಸೋಮವಾರ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ “ಸಮುದಾಯ ರಕ್ಷಕ” ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಜುಲೈ 25ರಂದು ಬೆಟಿಗೇರಿ ಬಡಾವಣೆ ಠಾಣಾ ವ್ಯಾಪ್ತಿಯ ಶ್ರೀ ಸಾಯಿಬಾಬಾ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣದ ಕಡೆಗೆ ಹೋಗುವಾಗ ಶ್ರೀ ಸಾಯಿ ಬಾಬಾ ದೇವಸ್ಥಾನದ ರಸ್ತೆಯ ಪಕ್ಕದಲ್ಲಿ ಗದಗ ತಾಲೂಕಿನ ನೀರಲಗಿ ಗ್ರಾಮದ ರವಿ ಈರಪ್ಪ ವಾಲ್ಮೀಕಿ ಇವರು ತಮ್ಮ ಬ್ಯಾಗನ್ನು ಕಳೆದುಕೊಂಡಿದ್ದರು. ರಸ್ತೆಯಲ್ಲಿ ಬ್ಯಾಗ್ ಬಿದ್ದಿದ್ದನ್ನು ಗಮನಿಸಿದ ಆಟೋ ಚಾಲಕ ಸಯ್ಯದ್ ಹುಸೇನ್ ಅವರು ಬೆಟಿಗೇರಿ ಬಡಾವಣೆ ಪೊಲೀಸ್ ಠಾಣೆಗೆ ನೀಡುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದರು.
ಸಾರ್ವಜನಿಕರಿಗೆ ಮತ್ತು ಪೊಲೀಸ್ ಇಲಾಖೆಗೆ ಆಟೋ ಚಾಲಕನ ಈ ಪ್ರಾಮಾಣಿಕತೆ ನೆರವಾಯಿತು. ಹೀಗಾಗಿ ಆಟೋ ಚಾಲಕ ಸಯ್ಯದ್ ಹುಸೇನ್ ಅವರಿಂದ ಮುಂದೆಯೂ ಇದೇ ರೀತಿ ಇಲಾಖೆಯೊಂದಿಗೆ ಸಹಾಯ, ಸಹಕಾರವನ್ನು ನೀಡಲು ಸೈಯದ್ ಹುಸೇನ್ ಅವರಿಗೆ “ಸಮುದಾಯ ರಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಟೋ ಚಾಲಕನ ಪ್ರಾಮಾಣಿಕತೆಗೆ ಎಸ್ಪಿ ರೋಹನ್ ಜಗದೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.