ಬೆಂಗಳೂರು:– ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ರಾಜಣ್ಣ ಅವರು ಶನಿವಾರ ಸಿಎಂ ಭೇಟಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ DCM ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, “ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ಯಾರು ಭೇಟಿ ಮಾಡಿದರು ಎಂಬುದರ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಿ? ನನಗೆ ಸಂಬಂಧಿಸಿದ ವಿಚಾರಗಳೇನಾದರೂ ಇದ್ದರೆ ಆ ಬಗ್ಗೆ ಮಾತ್ರ ಪ್ರಶ್ನೆ ಕೇಳಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೊಂಚ ಗರಂ ಆದರು.
ಮುಖ್ಯಮಂತ್ರಿಗಳು ಅಂದಮೇಲೆ ಎಲ್ಲಾ ಸಚಿವರು, ಶಾಸಕರು, ಸಂಸದರು, ಸಾರ್ವಜನಿಕರು ಭೇಟಿ ಮಾಡುವುದು ಸಹಜ. ನನ್ನನ್ನೂ ಅನೇಕರು ಭೇಟಿ ಮಾಡುತ್ತಾರೆ. ಇಂಥ ವಿಚಾರವಾಗಿ ಯಾವುದೇ ಪ್ರಶ್ನೆಗಳನ್ನು ನನಗೆ ಕೇಳಬೇಡಿ” ಎಂದರು.
“ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಸಚಿವರ ವಿರುದ್ಧ ಹೈಕಮಾಂಡ್ ಗರಂ ಆಗಿದೆಯಂತಲ್ಲಾ” ಎಂಬ ಪ್ರಶ್ನೆಗೆ, “ಇದೆಲ್ಲವೂ ಬೋಗಸ್, ಯಾರು ಗರಂ ಆಗಿದ್ದಾರೆ? ಸುಮ್ಮನೆ ಸುಳ್ಳು ಸುದ್ದಿಗಳನ್ನು ಸೃಷ್ಠಿ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.