ಬೆಂಗಳೂರು:- ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್ ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ.
ಯಾವ ತನಿಖೆಗೆ ಕೊಡಬೇಕು ಅಂತ ಸಿಎಂ ಜೊತೆಗೆ ಚರ್ಚೆ ಮಾಡ್ತೇನೆ. ಈಗಾಗಲೇ ಯಾವ ತನಿಖೆಗೆ ಕೊಡಬೇಕು ಅಂತ ಪ್ರಾಥಮಿಕವಾಗಿ ಅಂದುಕೊಂಡಿದ್ದೇವೆ, ಸಿಎಂ ಜೊತೆಗೆ ಚರ್ಚೆ ಮಾಡಿದ ಬಳಿಕ ಪ್ರಕಟಿಸುತ್ತೇವೆ ಅಂತ ಹೇಳಿದ್ದಾರೆ.
ಹನಿ ಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಇಷ್ಟು ದೊಡ್ಡ ಆರೋಪ ಬಂದಿದೆ, ಗಂಭೀರವಾಗಿ ತಗೊಳ್ಳಲೇಬೇಕಲ್ಲ. ರಾಜಣ್ಣ ಅವರು ಇಷ್ಟೊತ್ತಿಗೆ ದೂರು ಕೊಟ್ಟಿದ್ದರೆ ಯಾವ ಸ್ವರೂಪದ ತನಿಖೆ ಅಂತ ಘೋಷಣೆ ಮಾಡ್ತಿದ್ದೆವು ಎಂದು ತಿಳಿಸಿದ್ದಾರೆ. ಇನ್ನೂ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ನಾವು ನಮ್ಮದೇ ರೀತಿಯಲ್ಲಿ ಪರಿಶೀಲಿಸಿ ನಿರ್ಧಾರ ಮಾಡ್ತೇವೆ. ಇಷ್ಟು ದೊಡ್ಡ ಘಟನೆ ನಡೆದಿದೆ, ವಿಧಾನಸೌಧದಲ್ಲಿ ಚರ್ಚೆ ಆಗಿದೆ. ನಡೆಯದಿರೋದೆಲ್ಲ ನಡೆದಿದೆ, ಅಂಥದ್ರಲ್ಲಿ ಗಂಭೀರವಾಗಿ ತಗೊಳ್ಳಲಿಲ್ಲ ಅಂದ್ರೆ ಆಗಲ್ಲ ಎಂದಿದ್ದಾರೆ.