ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಪಟ್ಟಣದ ಸಮಗ್ರ ಅಭಿವೃದ್ಧಿ ಸೇರಿದಂತೆ ಪಟ್ಟಣದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಯುವ ಮುಖಂಡ ಹಾಗೂ ಪುರಸಭೆ ಸದಸ್ಯ ಸಂಗನಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಗೀತಾ ಮಾಡಲಗೇರಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ದುರ್ಗಪ್ಪ ಹಿರೇಮನಿಯವರನ್ನು ಕುರಿತು, ಎಲ್ಲ 23 ವಾರ್ಡ್ಗಳ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಕ್ಷ ಬೇಧ ಮರೆತು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು. ಮುಖ್ಯವಾಗಿ ಕಚೇರಿಯ ಆಡಳಿತಾತ್ಮಕ ಸುಧಾರಣೆಗೆ ಆದ್ಯತೆ ಒದಗಿಸುವ ಮೂಲಕ ಸಕಾಲಕ್ಕೆ ನಾಗರಿಕರ ಕೆಲಸಗಳು ಆಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ರೋಣ ಪುರಸಭೆಗೆ ಒಟ್ಟು 23 ಸದಸ್ಯರುಗಳಿದ್ದು, ಕಾಂಗ್ರೆಸ್ 16 ಹಾಗೂ ಬಿಜೆಪಿ 7 ಸದಸ್ಯರುಗಳನ್ನು ಹೊಂದಿದೆ. ಶಾಸಕ ಜಿ.ಎಸ್. ಪಾಟೀಲರ ಮಾರ್ಗದರ್ಶನದಂತೆ ಗೀತಾ ಮಾಡಲಗೇರಿ ಅಧ್ಯಕ್ಷರಾಗಿ ಹಾಗೂ ದುರ್ಗಪ್ಪ ಹಿರೇಮನಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಕಾರ್ಯವನ್ನು ತಹಸೀಲ್ದಾರ್ ನಾಗರಾಜ ಕೆ ಕಾರ್ಯ ನಿರ್ವಹಿಸಿದರು. ಸಿಪಿಐ ಎಸ್.ಎಸ್. ಬಿಳಗಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಮುಖಂಡರಾದ ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ಬಸವರಾಜ ನವಲಗುಂದ, ಶಫೀಕ ಮೂಗನೂರ, ಆನಂದ ಚಂಗಳಿ, ಸಂಗು ನವಲಗುಂದ, ಗದಿಗೇಪ್ಪ ಕಿರೇಸೂರ, ಮೌನೇಶ ಹಾದಿಮನಿ, ಸಂಜಯ ದೊಡ್ಡಮನಿ, ವಿನಾಯಕ ಜಕ್ಕಣಗೌಡ್ರ ಸೇರಿದಂತೆ ಪುರಸಭೆಯ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.