ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಮ್ಮ ಹೆತ್ತ-ತಂದೆತಾಯಿಗಳೇ ನಿಮಗೆ ದೇವರು. ಅವರನ್ನು ಎಂದಿಗೂ ಗೌರವಿಸಿ. ಇದರಿಂದ ನಿಮ್ಮ ಬಾಳು ಬಂಗಾರವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಪ್ರವೀಣ ಬಿರಾದಾರ ಹೇಳಿದರು.
ಪಟ್ಟಣದ ಕೆಜಿಎಂಎಸ್ ಶಾಲೆಯಲ್ಲಿ ನಡೆದ ಅಮೃತ ಭೋಜನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿತ್ಯವೂ ತಂದೆ-ತಾಯಿಗಳಿಗೆ ನಮಿಸುವದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿಯ ಸಂಚಯನವಾಗುತ್ತದೆ. ಇದರಿಂದ ನೀವು ಯಾವುದೇ ಕೆಲಸ ಕೈಗೊಂಡರೂ ಅದು ಯಶಸ್ವಿಯಾಗುತ್ತದೆ. ಒಂದು ತಿಂಗಳ ಪರ್ಯಂತ ಸಿಹಿ ಊಟದ ಅಮೃತ ಭೋಜನ ನೀಡಿದ ದಾನಿಗಳಿಗೆ ಮತ್ತು ಶಿಕ್ಷಕರ ಶ್ರಮಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಎಂದರು.
ತಂದೆ-ತಾಯಿ ಎಂದಿಗೂ ತಮ್ಮ ಮಕ್ಕಳಲ್ಲಿ ತಾರತಮ್ಯ ಮಾಡುವುದಿಲ್ಲ. ಅವರಿಗೆ ಎಲ್ಲ ಮಕ್ಕಳೂ ಒಂದೇ. ತಾಯಿಯನ್ನು ನಿಂದಿಸಿದವರಿಗೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಈ ಶಾಲೆಯ ಪ್ರಗತಿ ನನಗೆ ಸಂತಸ ನೀಡಿದ್ದು, ಈ ಶಾಲೆಗೆ ನಾನು 3 ಕಂಪ್ಯೂಟರ್‌ಗಳ ಕೊಡುಗೆ ನೀಡುತ್ತೇನೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಅಮೃತ ಭೋಜನದ ದಾನಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸದಸ್ಯ ಗಣಿ ಕುದರಿ, ಬಸವರಾಜ ಚೆನ್ನಿ, ಇಸ್ಮಾಯಿಲ್ ಮುದಗಲ್ಲ, ನಿವೃತ್ತ ಸೈನಿಕ ಎಂ.ಎಸ್. ಮಲ್ಲನಗೌಡ್ರ, ಶಮ್‌ಶಾದ್ ನಶೇಖಾನ, ಕಳಕಪ್ಪ ಮುಗಳಿ, ರಾಘವ ಹುಯಿಲಗೋಳ, ಗಣೇಶ ಬಂಡಿವಡ್ಡರ, ದರ್ಶನ ಗೋಡಿ, ರವಿ ಬಂಡಿವಡ್ಡರ, ಶಾಲಾ ಸಿಬ್ಬಂದಿಯವರು ಇದ್ದರು. ಶಿಕ್ಷಕ ಜೆ.ಎ. ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಎನ್.ಎಲ್. ಚವ್ಹಾಣ್ ನಿರೂಪಿಸಿದರು. ಶಿಕ್ಷಕ ಡಿ.ಎಸ್. ಕಳ್ಳಿ ವಂದಿಸಿದರು.
ಹಿರೆಅಳಗುಂಡಿ ಚನ್ನು ಪಾಟೀಲ ಫೌಂಡೇಷನ್‌ದ ಸಂಸ್ಥಾಪಕ ಕಾರ್ಯದರ್ಶಿ ಉಮೇಶ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಆಟಪಾಠಗಳೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆಂದೇ ನಮ್ಮ ಫೌಂಡೇಷನ್‌ನಿಂದ ರಾಷ್ಟ್ರ ಭಕ್ತರ ಪುಸ್ತಿಕೆಗಳನ್ನು ಹಂಚಲಾಗುತ್ತದೆ. ಇವುಗಳನ್ನು ಓದಿ ದೇಶ ಪ್ರೇಮಿಗಳಾಗಿರಿ ಎಂದರು.