ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕೃಷ್ಣನ ಭಕ್ತನಾದ ತಿಮ್ಮಪ್ಪನು ತಮ್ಮ ಬಾಲ್ಯದಲ್ಲಿ ಹೊಲದಲ್ಲಿ ನೆಲ ಅಗೆಯುತ್ತಿದ್ದಾಗ ಬಂಗಾರ ತುಂಬಿದ ಕೊಡ ದೊರೆತು, ಆ ಬಂಗಾರವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಜನರ ಹಿತಕ್ಕಾಗಿ ಬಳಸಿದ ಫಲವಾಗಿ ತಿಮ್ಮಪ್ಪನಿಗೆ ಕನಕದಾಸನೆಂದು ಪ್ರಸಿದ್ಧಿಯಾದಂತೆ ಗ್ರಾಮದ ಬಾಲಕ ಪ್ರಜ್ವಲ್ ತನ್ನ ಮನೆಯ ಪಾಯ ತೆಗೆಯುವಾಗ ದೊರೆತ ಬಂಗಾರದ ನಿಧಿಯನ್ನು ಸರಕಾರಕ್ಕೆ ನೀಡಿ ನಿಸ್ವಾರ್ಥತೆ ಮೆರೆದು ಆಧುನಿಕ ಕನಕನೆನಿಸಿಕೊಂಡಿದ್ದಾನೆ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪ್ರಭಾರಿ ಬೀರಲಿಂಗದೇವರು ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ಇಲ್ಲಿಯ ಪ್ರಜ್ವಲ್ ರಿತ್ತಿಯವರ ಮನೆಗೆ ಭೇಟಿ ನೀಡಿ ಪ್ರಜ್ವಲ್‌ನನ್ನು ಸನ್ಮಾನಿಸಿ ಮಾತನಾಡಿದ ಶ್ರೀಗಳು, ಪ್ರಜ್ವಲ್‌ನಂತಹ ವಿದ್ಯಾರ್ಥಿಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದ್ದು, ಅವನ ಪ್ರಾಮಾಣಿಕತೆಗೆ ಸರಕಾರ ಸೂಕ್ತವಾಗಿ ಗೌರವಿಸಿ ಅವರ ಬಡತನಕ್ಕೆ ನೆರವಾಗಬೇಕು ಎಂದರು.
ಸತ್ಯಪ್ಪ ಗುರಿಕಾರ, ವನಿತಾ ಗುರಿಕಾರ, ರವಿಚಂದ್ರ ಅಬ್ಬಿಗೇರಿ, ಸಾಹಿತಿ ಬಸವರಾಜ ಗರ್ಜಪ್ಪನವರ, ಮಠದ ವ್ಯವಸ್ಥಾಪಕ ಯಮನೂರಪ್ಪ ಹಾಜರಿದ್ದರು.



