ಹಿರಿಯರು ಸಮಾಜದ ಕಣ್ಣುಗಳಿದ್ದಂತೆ : ಬಸವರಾಜ ಬೊಮ್ಮಾಯಿ

0
Honour, Pratibha Puraskar programme
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಿರಿಯರು ನಮ್ಮ ದೇಶದ ಸಂಪತ್ತು. ಅವರ ಅನುಭವ, ಮಾರ್ಗದರ್ಶನ ಸಮಾಜಕ್ಕೆ ದಾರಿದೀಪವಾಗಿದೆ. ಕಿರಿಯರ ಭವಿಷ್ಯದ ಏಳ್ಗೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ತಂದೆ-ತಾಯಿಗಳು ಮತ್ತು ಹಿರಿಯರನ್ನು ಗೌರವ ಭಾವನೆಯಿಂದ ಕಾಣಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅವರು ಭಾನುವಾರ ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಸೋಮೇಶ್ವರ ಇಂಡಸ್ಟ್ರೀಸ್ ಆವರಣದಲ್ಲಿ ಲಕ್ಷ್ಮೇಶ್ವರ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ನಡೆದ ಸಂಸದರಿಗೆ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರು ಸಮಾಜದ ಕಣ್ಣುಗಳಿದ್ದಂತೆ. ಅವರು ನೀಡಿದ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳು ಬದುಕಿಗೆ ಮೂಲಾಧಾರವಾಗಿವೆ. ಹಿರಿಯರು, ಸಾಧಕರು, ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡಿದ ಪಂಚಮಸಾಲಿ ಸಮಾಜದ ಕಾರ್ಯ ಶ್ಲಾಘನೀಯ. ಕೃಷಿಯನ್ನೇ ಮೂಲಾಧಾರವಾಗಿಸಿಕೊಂಡ ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ಸ್ವಾಭಿಮಾನ, ಸಂಘಟನೆ, ಸ್ವಾವಲಂಬನೆ, ಸಹಕಾರ, ಸಹಬಾಳ್ವೆಗಳೆಂಬ ಉದಾತ್ತ ತತ್ವಗಳನ್ನು ಹೊಂದಿ ಇತರೇ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಇತರೇ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಯಾವ ಸಮಾಜ ತನ್ನ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿರುತ್ತದೆಯೋ ಅದರ ಋಣ ತೀರಿಸುವ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜ ಇನ್ನಷ್ಟು ವಿಶಾಲವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರ ತಾಲೂಕು ಪಂಚಮಸಾಲಿ ಸಮಾಜ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಸಮಾಜ ಸಂಘಟನೆಯ ಜತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ವೇಳೆ `ವೈದ್ಯರತ್ನ’ ಪುರಸ್ಕೃತ ಡಾ. ಶ್ರೀಕಾಂತ ಕಾಟೇವಾಲೆ, ಕಾಯಕರತ್ನ ಡಾ. ಪೂರ್ಣಾಜಿ ಖರಾಟೆ ಸೇರಿ ಹಿರಿಯರು, ರೈತರು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಪತ್ರಕರ್ತರನ್ನು ಸನ್ಮಾನಿಸಲಾಯಿತು. ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಅಧ್ಯಕ್ಷ ತೆವಹಿಸಿ ಮಾತನಾಡಿದರು.

ವೇದಿಕೆಯ ಮೇಲೆ ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಡಿ.ಬಿ. ಬಳಿಗಾರ, ಸಣ್ಣವೀರಪ್ಪ ಹಳೆಪ್ಪನವರ, ಗುರುನಾಥ ದಾನಪ್ಪನವರ, ಎಂ.ಆಆಯ್. ಮುಳಗುಂದ, ಸಿ.ಆರ್. ಲಕ್ಕುಂಡಿಮಠ, ಸಿ.ಜಿ. ಹಿರೇಮಠ, ಜಿ.ವಿ. ಪಾಟೀಲ, ಅಶೋಕ ಪಲ್ಲೇದ, ಸರೋಜಕ್ಕ ಬನ್ನೂರ, ಎನ್.ವಿ. ಹೇಮಗಿರಿಮಠ, ನಿಂಗಪ್ಪ ಬನ್ನಿ, ಸಿ.ವಿ. ಕೋಲಕಾರ, ಶಕುಂತಲಾ ಅಳಗವಾಡಿ, ಡಿ.ವೈ. ಹುನಗುಂದ, ಈರಣ್ಣ ಕಟಗಿ, ಎಸ್.ಎನ್. ಅಂಬಿಗೇರ ಸೇರಿ ಅನೇಕರಿದ್ದರು.

ಮೆಹಬೂಬ್ ಮುಲ್ಲಾ ಪ್ರಾಸ್ತಾವಿಕ ನುಡಿದರು. ನಾಗರಾಜ ಕುಲಕರ್ಣಿ ಸ್ವಾಗತಿಸಿದರು. ಎಂ.ಎಸ್. ಚಾಕಲಬ್ಬಿ, ಸ್ನೇಹಾ ಹೊಟ್ಟಿ, ಸಂತೋಷ ಕಾರಬಾರಿ ನಿರ್ವಹಿಸಿದರು.

ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆ ಎಲ್ಲರ ಮಂತ್ರವಾಗಬೇಕು. ಹಿರಿಯರನ್ನು ಗೌರವಿಸುವುದು ನಮ್ಮ ನಾಡಿನ ಸಂಸ್ಕಾರವಾಗಿದೆ. ಸಮಾಜ ನಮಗೇನು ಮಾಡಿದೆ ಎನ್ನುವದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬ ಆತ್ಮ ವಿಮರ್ಶೆ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here