ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ 5 ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದು, ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿಯವರ ಜೀವಮಾನದ ಸಾಧನೆಗಳು ಬೆರಗುಗೊಳಿಸುವಂಥದ್ದು. ಬಹುಶಃ ಇಂತಹ ಸಾಧನೆಯನ್ನು ದೇಶದ ರಾಜಕೀಯ ಇತಿಹಾಸದಲ್ಲಿ ಯಾರೂ ಮಾಡಲಾರರು ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2753ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಬಸವರಾಜ ಹೊರಟ್ಟಿಯವರ ಬದುಕು, ಸಂಘಟನೆ, ಹೋರಾಟ, ಜೀವಮಾನದ ಸಾಧನೆ, ಸನ್ಮಾನ ಜೊತೆಗೆ ಅವರ ನಡೆದು ಬಂದ ದಾರಿ ಕುರಿತು ಅವಲೋಕನ, ವಚನ ಸಾಹಿತ್ಯ ಪಿತಾಮಹ ಫ.ಗು. ಹಳಕಟ್ಟಿ ಹಾಗೂ ಪೂಜ್ಯಶ್ರೀ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಏರ್ಪಡಿಸಿದ್ದ ವಿಶೇಷ ಶಿವಾನುಭವದಲ್ಲಿ ಮಾತನಾಡಿದರು.
ಹೊರಟ್ಟಿಯವರ ಬದುಕು, ಹೋರಾಟ, ಸಂಘಟನೆ ಕುರಿತು ಪ್ರಾಚಾರ್ಯ ಶಿವಾನಂದ ಪಟ್ಟಣಶೆಟ್ಟಿಯವರು ಸುದೀರ್ಘವಾಗಿ ಮಾತನಾಡಿ, ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯವರೆಗಿನ ಎಲ್ಲ ಶಿಕ್ಷಕರ ಹಿತ ಕಾಯ್ದುಕೊಂಡು ಬಂದವರು ಹೊರಟ್ಟಿಯವರು. ಅಲ್ಲದೇ ಶ್ರೀಮಠದ ಅಭಿವೃದ್ಧಿಯಲ್ಲಿಯೂ ಹೊರಟ್ಟಿಯವರ ಮಾರ್ಗದರ್ಶನವಿದೆ. ಹೀಗಾಗಿ ಶ್ರೀಮಠ ಅವರನ್ನು ಸದಾಕಾಲ ಗೌರವಿಸುತ್ತಾ ಬಂದಿದೆ ಎಂದರು.
ವಚನ ಪಿತಾಮಹ ಫ.ಗು. ಹಳಕಟ್ಟಿ ಹಾಗೂ ಪೂಜ್ಯ ಲಿಂಗಾನAದ ಮಹಾಸ್ವಾಮಿಗಳ ಕುರಿತು ಪ್ರಾಚಾರ್ಯ ರಮೇಶ ಕಲ್ಲನಗೌಡ್ರ ಉಪನ್ಯಾಸ ನೀಡಿ, ವಚನ ಸಾಹಿತ್ಯ ಇಂದು ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಕಾರಣೀಭೂತರು ಫ.ಗು. ಹಳಕಟ್ಟಿಯವರು. ತಮ್ಮೆಲ್ಲ ಆಸ್ತಿಯನ್ನು ಮಾರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ, ವಚನ ಸಾಹಿತ್ಯವನ್ನು ಮುದ್ರಣ ಮಾಡುವ ಮೂಲಕ ನಾಡಿಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಪೂಜ್ಯ ಲಿಂಗಾನಂದರು ಕೂಡಾ ವಚನ ಸಾಹಿತ್ಯ, ಶರಣ ಸಾಹಿತ್ಯಕ್ಕೆ ಹೊಸತನ ತರುವ ಮೂಲಕ ಈ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಡಾ. ಬಸವರಾಜ ಧಾರವಾಡ ಮಾತನಾಡಿ, ಬಸವರಾಜ ಹೊರಟ್ಟಿಯವರು ಶಿಕ್ಷಕ ಸಮೂಹದ ಅತ್ಯಂತ ನಂಬಿಗಸ್ಥ ನಾಯಕರು. ಇಂತಹ ನಾಯಕರು ಕರ್ನಾಟಕದ ಶಿಕ್ಷಕರ ಪಾಲಿಗೆ ಸಿಕ್ಕಿದ್ದು ಭಾಗ್ಯವೇ ಸರಿ. ಇವರೊಬ್ಬ ನಾಡಿನ ಅಪರೂಪದ ನಾಯಕ ಹಾಗೂ ಇತರ ಜನಪ್ರತಿನಿಧಿಗಳಿಗೆ ಮಾದರಿಯಾದ ರಾಜಕಾರಣಿ ಎಂದರು.
ಸನ್ಮಾನ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನನ್ನೆಲ್ಲ ಶ್ರೇಯಸ್ಸು ನಾನು ನಂಬಿಕೊಂಡು ಬಂದ ಶಿಕ್ಷಕರ ಸಮೂಹಕ್ಕೆ ಸಲ್ಲಬೇಕು. ನಾ ಇಂದು ಏನೇ ಆಗಿದ್ದರೂ ಅದಕ್ಕೆ ಕಾರಣ ಶಿಕ್ಷಕರು. ನನ್ನ ತಾಯಿಯ ಆಶೀರ್ವಾದ, ನಮ್ಮ ತಂದೆಯ ಆದರ್ಶಗಳು ಶ್ರೀಮಠದ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಅಪೇಕ್ಷಾ ಎಸ್.ಹೊನಗಣ್ಣವರ ಧರ್ಮಗ್ರಂಥ ಪಠಣಗೈದರು. ವಚನ ಚಿಂತನವನ್ನು ಸೃಷ್ಟಿ ವಿ.ಪೂಜಾರ ಮಾಡಿದರು. ದಾಸೋಹ ಸೇವೆಯನ್ನು ನಿವೃತ್ತ ಶಿಕ್ಷಕ ಮಹಾಂತೇಶ ಹೂಗಾರ ಮತ್ತು ಕುಟುಂಬದವರು ವಹಿಸಿಕೊಂಡಿದ್ದರು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು. ವಿದ್ಯಾ ಪ್ರಭು ಗಂಜಾಳ ನಿರೂಪಿಸಿದರು. ಈ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ, ಉದ್ದಿಮೆದಾರ ಅಶೋಕ ಜೈನ, ಎಸ್.ಎಂ. ಅಗಡಿ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ಹೆಚ್.ಡಿ. ಪೂಜಾರ, ರವಿ ಕೊಣ್ಣೂರು, ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಕೋಶಾಧ್ಯಕ್ಷ ಬಸವರಾಜ ಸಿ.ಕಾಡಪ್ಪನವರ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ, ಸಂಘಟನಾ ಕಾರ್ಯದರ್ಶಿಗಳಾದ ಮಹೇಶ ಗಾಣಿಗೇರ, ನಾಗರಾಜ ಹಿರೇಮಠ, ಶಿವಾನುಭವ ಸಮಿತಿ ಚೇರಮನ್ ಆಯ್.ಬಿ. ಬೆನಕೊಪ್ಪ, ಶಿವಾನಂದ ಫ.ಹೊಂಬಳ ಮುಂತಾದವರು ಉಪಸ್ಥಿತರಿದ್ದರು.