ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪುರಸಭೆ ವ್ಯಾಪ್ತಿಯ 20ನೇ ವಾರ್ಡಿನ ಕೃಷ್ಣಾಪೂರ ಗ್ರಾಮದ ಶಿವಲಿಂಗನಗೌಡ ಪಾಟೀಲ (65) ಪ್ರಮೀಳಾ ಪಾಟೀಲ (54) ದಂಪತಿಗಳು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದ ಬಳಿ ಲಾರಿ-ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮೃತ ದಂಪತಿಗಳು ರೋಣ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಚಹಾಪುಡಿ ಅಂಗಡಿ ಮಾಲಿಕರು ಎಂದೇ ಪ್ರಸಿದ್ಧರಾಗಿದ್ದರು. ದಂಪತಿಗಳಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಪಟ್ಟಣದಲ್ಲಿ ಚಹಾಪುಡಿ ವ್ಯಾಪಾರದ ಜೊತೆಗೆ ಬುಕ್ ಸ್ಟಾಲ್, ಸ್ಟೇಷನರಿ ಅಂಗಡಿಯನ್ನೂ ಹೊಂದಿದ್ದ ಇವರು, ತಾವು ನಿರ್ಮಿಸಿದ್ದ ಬೃಹತ್ ಕಟ್ಟಡದ ಪ್ರವೇಶವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಭ್ರಮದಿದ ನೆರವೇರಿಸಿದ್ದರು.
ಕೃಷ್ಣಾಪೂರ ಗ್ರಾಮದಿಂದ ಗುರುವಾರ ರಾತ್ರಿ ಶಿವಲಿಂಗನಗೌಡ ಪಾಟೀಲರು ಪತ್ನಿ ಮತ್ತು ಪತ್ನಿಯ ತಾಯಿ ಅಣ್ಣಮ್ಮ, ಅಳಿಯ ಬಸವರಾಜರೊಡಗೂಡಿ ಚಾಲಕನೊಂದಿಗೆ ಅತ್ತೆಯ ಆರೋಗ್ಯ ಚಿಕಿತ್ಸೆ ವಿಷಯವಾಗಿ ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ತೆರಳಿದ್ದರು. ಇನ್ನೇನು ಬೆಂಗಳೂರು ಸಮೀಪಿಸುತ್ತಿರುವಾಗಲೇ ಭೀಕರ ಅಪಘಾತ ಸಂಭವಿಸಿ ದಂಪತಿಗಳು ಸಾವನ್ನಪ್ಪಿದ್ದು, ಅಳಿಯ ಬಸವರಾಜ, ಅತ್ತಿಗೆ ಅಣ್ಣಮ್ಮ, ಚಾಲಕ ಬಡಿಗೇರ ಎನ್ನುವರಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ತಿಳಿದುಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ರೋಣ ಪಟ್ಟಣ ಸೇರಿದಂತೆ ಕೃಷ್ಣಾಪೂರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ನಿನ್ನೆ ನೋಡಿದ ದಂಪತಿಗಳು ಇಂದು ಇಲ್ಲವೆಂಬ ವಿಷಯ ಮನಸ್ಸಿಗೆ ನೋವುಂಟುಮಾಡಿದೆ. ಶಿವನಗೌಡ ದಂಪತಿಗಳು ಸದಾ ಹಸನ್ಮುಖಿಯಾಗಿರುತ್ತಿದ್ದರು. ತಮ್ಮ ವ್ಯಾಪಾರ-ವಹಿವಾಟಿನಲ್ಲಿ ಪ್ರಾಮಾಣಿಕತೆಯಿಂದಿದ್ದವರು. ಅವರ ದುರಂತ ಸಾವು ನಮ್ಮನ್ನು ಮೌನಕ್ಕೆ ಜಾರುವಂತೆ ಮಾಡಿದೆ ಎಂದು ವ್ಯಾಪಾರಸ್ಥರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
“ಶಿವನಗೌಡ ದಂಪತಿಗಳ ಮರಣದ ಸುದ್ದಿಯನ್ನು ಕೇಳಿ ನನ್ನ ಮನಸ್ಸಿಗೂ ತುಂಬಾ ಆಘಾತವಾಯಿತು. ದಂಪತಿಗಳಿಬ್ಬರೂ ಸಹ ಎಲ್ಲರೊಂದಿಗೆ ಬೆರೆತು ಜೀವನ ನಿರ್ವಹಿಸಿದವರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಕುಟುಂಬಸ್ಥರೊಡಿಗೆ ಸದಾ ಇರುತ್ತೇನೆ”
ಜಿ.ಎಸ್. ಪಾಟೀಲ.
ಶಾಸಕರು, ರೋಣ.


