ಮಂಡ್ಯ:- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಟಿಪ್ಪರ್ ಲಾರಿ ಮತ್ತು ಇನೋವ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದಲ್ಲಿ ಹುಣಸೂರು ಮೂಲದ ಕಾರು ಚಾಲಕ ಚಂದ್ರಶೇಖರ್ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಚಂದ್ರಶೇಖರ್ ಹುಣಸೂರು ಕಡೆಗೆ ಹೋಗುತ್ತಿದ್ದ ವೇಳೆ, ಎದುರಿನಿಂದ ಬಂದ ಟಿಪ್ಪರ್ ಕಾರಿಗೆ ಡಿಕ್ಕಿಯಾಗಿದೆ. ಬೆಂಕಿ ತೀವ್ರವಾಗಿದ್ದರಿಂದ ಚಂದ್ರಶೇಖರ್ ಕಾರಿನಿಂದ ಹೊರಬರಲು ಸಾಧ್ಯವಾಗಿಲ್ಲ.
ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ಆರಿಸಿದರೂ, ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಮೃತದೇಹವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆ ಶವಗಾರಕ್ಕೆ ಕಳುಹಿಸಲಾಗಿದೆ.
ಈ ಘಟನೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


