ಗಾಂಧಿನಗರ: ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಯಾತ್ರಿಕರು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ರಾಜ್ಕೋಟಿನ ಗಡ್ಕಾ ಗ್ರಾಮದಿಂದ ದೇಕಾವಾಲಾ ದೇವಸ್ಥಾನಕ್ಕೆ ಯಾತ್ರಿಕರ ಗುಂಪು ಕಾಲ್ನಡಿಗೆಯಲ್ಲಿ ತೆರಳುತ್ತಿತ್ತು. ಸುರೇಂದ್ರನಗರ ಜಿಲ್ಲೆಯ ಭಾಸ್ಕರ್ಪಾರ ಬಳಿ ಇರುವ ಲಖ್ತಾರ್–ವಿರಮ್ಗಾಮ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ, ವೇಗವಾಗಿ ಬಂದ ಟ್ರಕ್ ಸುಮಾರು ಹತ್ತು ಮಂದಿಗೆ ಡಿಕ್ಕಿ ಹೊಡೆದಿದೆ.
ರಸ್ತೆ ಬದಿಯಲ್ಲಿ ಟೈರ್ ಬದಲಾಯಿಸಲು ನಿಲ್ಲಿಸಲಾಗಿದ್ದ ಡಂಪರ್ ಟ್ರಕ್ ಅನ್ನು ದಾಟುವ ಸಂದರ್ಭದಲ್ಲಿ, ಹಿಂದಿನಿಂದ ಬಂದ ಮತ್ತೊಂದು ಟ್ರಕ್ ನಿಯಂತ್ರಣ ತಪ್ಪಿ ಯಾತ್ರಿಕರ ಮೇಲೆ ಹರಿದಿದೆ. ಈ ಭೀಕರ ಅಪಘಾತದಲ್ಲಿ 6 ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದಲ್ಲದೆ, ಟೈರ್ ಬದಲಾಯಿಸುತ್ತಿದ್ದ ಡಂಪರ್ ಟ್ರಕ್ ಚಾಲಕನ ಮೇಲೂ ಟ್ರಕ್ ಹರಿದಿದ್ದು, ಅವನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಈ ಮೂಲಕ ಮೃತರ ಸಂಖ್ಯೆ 7ಕ್ಕೆ ಏರಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.



