ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘೋರ ಘಟನೆ ನಡೆದಿದ್ದು, ಲಿವಿಂಗ್ ಟುಗೆದರ್ನಲ್ಲಿದ್ದ 26 ವರ್ಷದ ಮಹಿಳೆಯನ್ನು 52 ವರ್ಷದ ವ್ಯಕ್ತಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ದಕ್ಷಿಣದ ಹುಳಿಮಾವುನಲ್ಲಿ ನಡೆದಿದೆ. ವನಜಾಕ್ಷಿ (26) ಮೃತ ದುರ್ದೈವಿಯಾಗಿದ್ದು, ಕ್ಯಾಬ್ ಚಾಲಕನಾಗಿದ್ದ ವಿಠಲ (52) ಕೃತ್ಯ ಎಸಗಿದ ಪಾಪಿಯಾಗಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂದಿಸಿದ್ದು, ಇವರಿಬ್ಬರೂ ಆನೇಕಲ್ ಬಳಿಯ ಮಳೆನಲ್ಲಸಂದ್ರ ಗ್ರಾಮದ ನಿವಾಸಿಗಳಾಗಿದ್ದಾರೆ.
ಆರೋಪಿ ವಿಠ್ಠಲನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಮೊದಲ ಪತ್ನಿ ಮೃತಪಟ್ಟಿದ್ದು ನಂತರ ಮತ್ತೊಂದು ಮದುವೆಯಾಗಿದ್ದ. ಎರಡನೇ ಪತ್ನಿ ಬೇರೊಬ್ಬನ ಜೊತೆ ಪರಾರಿಯಾಗಿದ್ದಳು. ಅತ್ತ ವನಜಾಕ್ಷಿಗೆ ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದ. ಈ ನಡುವೆ ವಿಠ್ಠಲ ವಿಧವೆ ವನಜಾಕ್ಷಿಯ ಸಾಂಗತ್ಯ ಬೆಳೆಸಿದ್ದ. ಕಳೆದ ಮೂರ್ನಾಲ್ಕು ವರ್ಷಗಳಿಂದ ವನಜಾಕ್ಷಿ ಜೊತೆ ಲಿವಿಂಗ್ ಟುಗೆದರ್ನಲ್ಲಿದ್ದ.
ಕಳೆದ ಕೆಲವು ದಿನಗಳಿಂದ ವನಜಾಕ್ಷಿ ಆತನನ್ನು ಕಡೆಗಣಿಸುತ್ತಿದ್ದಳು. ಅಲ್ಲದೆ, ಮಾಡಿ ಅದೇ ಗ್ರಾಮದ ಮತ್ತೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು. ಕಳೆದೊಂದು ತಿಂಗಳಿನಿಂದ ಇದೇ ವಿಚಾರಕ್ಕೆ ವಿಠ್ಠಲ ಹಾಗೂ ವನಜಾಕ್ಷಿ ನಡುವೆ ಜಗಳವಾಗುತ್ತಿತ್ತು. ಇದೇ ಸಮಯದಲ್ಲಿ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಕಾರಿನಲ್ಲಿ ಹೋಗುತ್ತಿರುವುದನ್ನು ಕಂಡು ಕೋಪಗೊಂಡಿದ್ದ.
ಆಕೆಯ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿ ಆರೋಪಿ ತನ್ನ ಕಾರಿನಲ್ಲಿದ್ದ 5 ಲೀಟರ್ ಪೆಟ್ರೋಲ್ ತೆಗೆದು ವನಜಾಕ್ಷಿ ಮೇಲೆ ಸುರಿಯಲು ಮುಂದಾದ. ಇದರಿಂದ ಭಯಭೀತಳಾದ ವನಜಾಕ್ಷಿ ಕಾರಿನಿಂದ ಇಳಿದು ಅಲ್ಲಿಂದ ಓಡಿಹೋಗಿದ್ದಾಳೆ. ಆದರೂ ಅಷ್ಟಕ್ಕೆ ಬಿಡದ ಆರೋಪಿ ಆಕೆಯನ್ನು ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ತೀವ್ರವಾಗಿ ಸುಟ್ಟು ಗಾಯಗಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಹುಳಿಮಾವು ಪೊಲೀಸರು ಆರೋಪಿ ವಿಠ್ಠಲನನ್ನು ಬಂಧಿಸಿದ್ದಾರೆ.