ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಅರ್ಚಕನೊಬ್ಬನ ಹತ್ಯೆ ಪ್ರಕರಣ ಇದೀಗ ಸಂಚಲನ ಮೂಡಿಸಿದೆ. ಮಂಡ್ಯ ಜಿಲ್ಲೆಯ ಈ ಪ್ರಕರಣದಲ್ಲಿ ಪತ್ನಿಯೇ ಪ್ರಿಯಕರ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಹತ್ಯೆಯಾದ ಅರ್ಚಕನನ್ನು ಸಿದ್ದಲಿಂಗಪ್ಪ (46) ಎಂದು ಗುರುತಿಸಲಾಗಿದೆ. ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ, ಪ್ರಿಯಕರ ಹರೀಶ್ ಮತ್ತು ಆತನ ಸ್ನೇಹಿತರಾದ ಸಂತೋಷ್ ಹಾಗೂ ಗಣೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 6ರಂದು ಸಿಡಿಎಸ್ ನಾಲೆಯಲ್ಲಿ ಸಿದ್ದಲಿಂಗಪ್ಪ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅಪಘಾತವಾಗಿರಬಹುದು ಎಂಬ ಅನುಮಾನ ಇದ್ದರೂ, ಸ್ಥಳದಲ್ಲಿ ಸಿಕ್ಕಿದ್ದ ಚಪ್ಪಲಿ ಮತ್ತು ರಕ್ತದ ಕಲೆಗಳು ಪೊಲೀಸರಲ್ಲಿ ಅನುಮಾನ ಮೂಡಿಸಿತು.
ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಹಾಗೂ ಹರೀಶ್ ನಡುವಿನ ಅನೈತಿಕ ಸಂಬಂಧದ ವಿಚಾರ ಬೆಳಕಿಗೆ ಬಂದಿದೆ. ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪ ಈ ಸಂಬಂಧದ ಬಗ್ಗೆ ತಿಳಿದು ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ನಂತರ ಕುಟುಂಬವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪತ್ನಿಗೆ ಬುದ್ಧಿಮಾತು ಹೇಳಿ ಸರಿದಾರಿಗೆ ತರಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಆದರೆ ಪತಿ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದುಕೊಂಡ ಶಾಲಿನಿ, ಪ್ರಿಯಕರ ಹರೀಶ್ ಜೊತೆಗೂಡಿ ಕೊಲೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 6ರಂದು ಸಿದ್ದಲಿಂಗಪ್ಪ ಪೂಜೆಗಾಗಿ ಹೊರಗಡೆ ತೆರಳಿದ್ದಾಗ ಶಾಲಿನಿ ಹರೀಶ್‌ಗೆ ಸಂದೇಶ ಕಳುಹಿಸಿ ಪತಿ ಮನೆಗೆ ಮರಳುವ ಬಗ್ಗೆ ಮಾಹಿತಿ ನೀಡಿದ್ದಳು.
ಪೂಜೆ ಮುಗಿಸಿಕೊಂಡು ಬೈಕ್‌ನಲ್ಲಿ ಮರಳುತ್ತಿದ್ದ ಸಿದ್ದಲಿಂಗಪ್ಪ ಅವರನ್ನು ಹರೀಶ್ ಮತ್ತು ಆತನ ಸ್ನೇಹಿತರಾದ ಸಂತೋಷ್ ಹಾಗೂ ಗಣೇಶ್ ಅಡ್ಡಗಟ್ಟಿ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹ ಮತ್ತು ಬೈಕ್ ಅನ್ನು ಸಿಡಿಎಸ್ ನಾಲೆಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.
ಘಟನೆ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಪ್ರಕರಣದ ನಿಜಾಂಶವನ್ನು ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ಶಾಲಿನಿ ಸೇರಿದಂತೆ ಆರೋಪಿಗಳು ಕೃತ್ಯ ಒಪ್ಪಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



