ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆಗೈದು, ಬಳಿಕ ಶವವನ್ನು ಸುಟ್ಟುಹಾಕಿದ ಭೀಕರ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಜ್ಯೋತಿ ಕಪಾಳೆ ಹಿರೇಮಠ (57) ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಜ್ಯೋತಿ ಅವರು ಸಾಮಾನ್ಯವಾಗಿ ವಾರಕ್ಕೊಮ್ಮೆ ಕಲಬುರಗಿಗೆ ಬಂದು ಮತ್ತೆ ಬೀದರ್ಗೆ ತೆರಳುತ್ತಿದ್ದರು. ಇದೇ ವೇಳೆ ಕಲಬುರಗಿಯಿಂದ ಬೀದರ್ಗೆ ತೆರಳುವ ಮಾರ್ಗ ಮಧ್ಯೆ, ಕಮಲಾಪುರ ಸಮೀಪದ ಕಲ್ಮೂಡ ಗ್ರಾಮದಲ್ಲಿ ದುಷ್ಕರ್ಮಿಗಳು ಅವರನ್ನು ಕೊಲೆಗೈದು, ರಸ್ತೆ ಬದಿಯಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣವಾಗಿ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ವೇಳೆ ಮೃತರ ಗುರುತು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಮುಂದುವರಿದಿದೆ.



