ಅಫ್ಘಾನಿಸ್ತಾನ:- ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಬಸ್ಸೊಂದು ಬೆಂಕಿಗಾಹುತಿಯಾಗಿದ್ದು, ಘಟನೆಯಲ್ಲಿ 71 ಮಂದಿ ಸುಟ್ಟು ಕರಕಲಾಗಿದ್ದಾರೆ.
ಅಪಘಾತದಲ್ಲಿ ಪ್ರಯಾಣಿಕರ ಬಸ್ಸೊಂದು ಟ್ರಕ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತ್ತು. ನೋಡ ನೋಡುತ್ತಲೇ ಜನರು ಸುಟ್ಟು ಕರಕಲಾಗಿದ್ದಾರೆ. 17 ಮಕ್ಕಳು ಸೇರಿದಂತೆ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ವಕ್ತಾರ ಅಹ್ಮದುಲ್ಲಾ ಮುತ್ತಕಿ ಪೋಸ್ಟ್ ಮಾಡಿದ್ದು, ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಪಘಾತ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ, ಡಿಕ್ಕಿಯ ನಂತರ ಬಸ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದು, ಅಲ್ಲಿದ್ದ ಜನ ಭಯಭೀತರಾಗಿದ್ದಾರೆ. ಈ ಅಪಘಾತಕ್ಕೆ ಬಸ್ಸಿನ ಅತಿವೇಗ ಮತ್ತು ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.