ಲಕ್ನೋ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೊಲೆರೊ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯ ಪಹಾಡಿ ಗೇಟ್ ಸಮೀಪದ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.
ಹೊಟ್ಟು ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಕ್ಕದಲ್ಲಿ ಚಲಿಸುತ್ತಿದ್ದ ಬೊಲೆರೊ ವಾಹನದ ಮೇಲೆ ಉರುಳಿಬಿದ್ದಿದೆ. ಡಿಕ್ಕಿಯ ತೀವ್ರತೆಗೆ ಬೊಲೆರೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಜೆಸಿಬಿ ಸಹಾಯದಿಂದ ಲಾರಿಯನ್ನು ತೆರವುಗೊಳಿಸಿ, ಬೊಲೆರೊ ವಾಹನವನ್ನು ಹೊರತೆಗೆದುಕೊಳ್ಳಲಾಯಿತು. ಮೃತ ಚಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.



