ವಿಜಯನಗರ: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಮಗನಿಂದಲೇ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿದ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿ ಅಕ್ಷಯ್‌ನನ್ನು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆತಂದು ಪೊಲೀಸರು ಮಹತ್ವದ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಕರೆತಂದಿದ್ದಾರೆ. ಆರೋಪಿ ಅಕ್ಷಯ್‌ನ್ನು ಕೊಟ್ಟೂರಿನ ಎಲ್.ಬಿ. ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಆತಂಕಕಾರಿ ಬೆಳವಣಿಗೆಗಳು ಕಂಡುಬಂದಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ಹಾಲ್‌ನಲ್ಲೇ ತಂದೆ–ತಾಯಿ–ತಂಗಿಯ ಮೂರು ಶವಗಳನ್ನು ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಸಹಾಯಕ ಆಯುಕ್ತ (ಎಸಿ) ಹಾಗೂ ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯಲು ಸಿದ್ಧತೆ ನಡೆಸಲಾಗಿದೆ.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಫೊರೆನ್ಸಿಕ್ ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಭೀಕರ ಪ್ರಕರಣ ಕೊಟ್ಟೂರು ಪಟ್ಟಣದಲ್ಲಿ ಭಯ ಮತ್ತು ಆತಂಕವನ್ನು ಮೂಡಿಸಿದೆ.



