ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಗದಗ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಎಲ್ಲ ತಾಂತ್ರಿಕ ಅಧಿಕಾರಿಗಳಿಗಾಗಿ ತ್ರೈಮಾಸಿಕ ತೋಟಗಾರಿಕೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಬೆಳಗಾವಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಐ.ಕೆ. ದೊಡ್ಡಮನಿ ಗದಗ ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಪ್ರಸ್ತುತ ಕೀಟ ಮತ್ತು ರೋಗಗಳ ಸಮಸ್ಯೆಗಳು ಮತ್ತು ಅವುಗಳ ನಿವಾರಣೋಪಾಯ ಕುರಿತು ಮಾಹಿತಿ ನೀಡಿ ರೈತರಿಗೆ ಹಾಗೂ ತಾಂತ್ರಿಕ ಅಧಿಕಾರಿಗಳಿಗೆ ಜಾಗೃತಿ ಮೂಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟ ಶಾಸ್ತ್ರಜ್ಞ ಡಾ. ಸಿ.ಎಂ. ರಫಿ ಅವರು ಕೀಟ ಮತ್ತು ರೋಗಗಳ ಸಮಸ್ಯೆ ನಿವಾರಿಸುವ ಕ್ರಮವನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಶಿಕಾಂತ ಕೋಟಿಮನಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಾಗಾರದಲ್ಲಿ ಗದಗ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಎಲ್ಲ ತಾಂತ್ರಿಕ ಅಧಿಕಾರಿಗಳು ಪಾಲ್ಗೊಂಡಿದ್ದರು.



