ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರದಲ್ಲಿ ಮನೆಬಿದ್ದು ಮೂವರು ಸಾವಿಗೀಡಾದ ಘಟನಾ ಸ್ಥಳಕ್ಕೆ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವಯಕ್ತಿಕ ಆರ್ಥಿಕ ನೆರವು ನೀಡಿದರು. ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಸುಕಿನಜಾವ ಮಳೆಗೆ ಮನೆಯ ಗೋಡೆ ಕುಸಿದು ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವಿಗೀಡಾಗಿದ್ದರು.
ಮನೆ ಬಿದ್ದಿದ್ದ ಸ್ಥಳವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಪರಿಶೀಲನೆ ನಡೆಸಿ, ದುರಂತಕ್ಕೆ ಏನು ಕಾರಣ ಎಂಬ ಮಾಹಿತಿ ಪಡೆದು ಕುಟುಂಬಸ್ಥರಿಗೆ ಧೈರ್ಯ ಹಾಗೂ ಸಾಂತ್ವನ ಹೇಳಿದರು. ಪ್ರತಿ ಮೃತರ ಕುಟುಂಬಸ್ಥರಿಗೆ ತಲಾ 50 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಗಾಯಾಳುಗಳಿಗೆ ಒಟ್ಟು 50 ಸಾವಿರ ರೂ. ನೆರವು ನೀಡಿದರು. ಅಲ್ಲದೇ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಇದೊಂದು ದೊಡ್ಡ ದುರಂತ, ಈ ಸುದ್ದಿ ಕೇಳಿ ನನಗೆ ಬಹಳ ದುಃಖ ಆಗಿದೆ. ಮೃತರ ಆತ್ಮಕ್ಕೆ ಶಾಂತಿ ಲಭಿಸಿಲಿ ಹಾಗೂ ಕುಟುಂಬಸ್ಥರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು. ಘಟನೆ ನಡೆದಾಗ ಆ್ಯಂಬುಲೆನ್ಸ್ ಬೇಗ ಬಂದಿದ್ದರೆ ಜೀವಗಳು ಉಳಿಯುತ್ತಿದ್ದವು. ಅವರು ತಡವಾಗಿ ಬಂದಿರುವುದು ಕೂಡಾ ಜೀವ ಹೋಗುವುದಕ್ಕೆ ಕಾರಣ ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ನನಗೆ ಮಾಹಿತಿ ನೀಡಿದ್ದಾರೆ. ಹಾಗೇ ಸರ್ಕಾರ ಯಾವುದೆ ಮುಂಜಾಗ್ರತಾ ಕ್ರಮ ತೆಗದುಕೊಂಡಿಲ್ಲ ಸರ್ಕಾರ ನೆರೆ ಹಾಗೂ ಬರವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.