ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಭಾನುಮಾರ್ಕೆಟ್ ಹತ್ತಿರ ಮಂಗಳವಾರ ರಾತ್ರಿ ಮನೆಯ ಮಾಳಿಗೆ ಕುಸಿದು ಬಿದ್ದು ಮೂವರು ವೃದ್ಧರು, ಓರ್ವ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳೆಯದಾದ ಜಂತಿ ಮನೆ ಮಳೆಗೆ ಸೋರುವುದನ್ನು ತಪ್ಪಿಸಲು ಪ್ಲಾಸ್ಟಿಕ್ ಹೊದಿಕೆ ಹಾಕಿದ್ದಾರೆ. ಕಳೆದ ಒಂದು ವಾರದ ಜಿನುಗು ಮಳಗೆ ಮೊದಲೇ ಸೋರುತ್ತಿದ್ದ ಮನೆಯ ಮಾಳಿಗೆ ಜಂತಿ ಸಮೇತ ಕುಸಿದಿದೆ. ಮಲಗಿದ್ದ ಗಂಗಪ್ಪ ಸಿದ್ರಾಮಪ್ಪ ಹತ್ತಿಕಾಳ, ಸರೋಜಾ ಗಂಗಪ್ಪ ಹತ್ತಿಕಾಳ ಮತ್ತು ಚಂಬವ್ವ ಮಹಾಂತಶೆಟ್ಟರ ಈ ಮೂವರು ಮಣ್ಣಿನಡಿ ಸಿಲುಕಿ ಒದ್ದಾಡಿ ಕಿರುಚಾಡಿದ್ದಾರೆ. ಈ ಸಪ್ಪಳಕ್ಕೆ ಎಚ್ಚೆತ್ತ ನೆರೆ-ಹೊರೆಯವರು ಇವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ತಹಸೀಲ್ದಾರ ವಾಸುದೇವ ಸ್ವಾಮಿ ಭೇಟಿ ಮಾಡಿ, ತೀವ್ರವಾಗಿ ಗಾಯಗೊಂಡಿದ್ದ ಓರ್ವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಮನೆ ಕಳೆದುಕೊಂಡು ನಿರ್ಗತಿಕರಾದ ಕುಟುಂಬಕ್ಕೆ ತಾತ್ಕಾಲಿಕ ವಸತಿ ಕಲ್ಪಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು ಮತ್ತು ಮನೆ ನಿರ್ಮಾಣಕ್ಕೆ ಪರಿಹಾರ ಕಲ್ಪಿಸುವುದಾಗಿ ಹೇಳಿದರು. ಈ ವೇಳೆ ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಗ್ರಾಮ ಲೆಕ್ಕಾಧಿಕಾರಿ ಡಿ.ಎಸ್. ಕುಲಕರ್ಣಿ, ಬಸವರಜ ಮೆಣಸಿನಕಾಯಿ ಸೇರಿ ಹಲವರಿದ್ದರು.


