ಗ್ರಾ.ಪಂ ಸಿಬ್ಬಂದಿಯಿಂದ ಮನೆ ಮನೆ ಭೇಟಿ: ಅಕ್ಟೋಬರ್ 30 ಕೊನೆಯ ದಿನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ, ಜಾಬ್ ಕಾರ್ಡ್ ಪಡೆದ ಕುಟುಂಬಸ್ಥರು ಅಕ್ಟೋಬರ್ 30ರ ಒಳಗಾಗಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಈಚೆಗೆ ಮನೆ ಮನೆ ಭೇಟಿ ಮಾಡಲು ತಮ್ಮ ಮನೆಗಳಿಗೆ ಬಂದಾಗ ಸಹಕಾರ ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ತಿಳಿಸಿದರು.

Advertisement

ಗದಗ ತಾಲೂಕು ಪಂಚಾಯಿತಿಯಿಂದ ಗೂಗಲ್ ಮೀಟ್ ಮೂಲಕ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿದರು.

ಸಕ್ರಿಯ ಉದ್ಯೋಗ ಚೀಟಿಗಳಿಗೆ ಇ-ಕೆವೈಸಿ ಮಾಡುವಂತೆ ಆಯುಕ್ತಾಲಯದಿಂದ ಆದೇಶ ಬಂದಿದೆ. ಅದರಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ, ಇ-ಕೆವೈಸಿ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ ಸಕ್ರಿಯವಾಗಿರುವ ಜಾಬ್‌ಕಾರ್ಡ್‌ಗಳಿಗೆ ಇ-ಕೆವೈಸಿ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಸಿಬ್ಬಂದಿಗಳು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರೂ ತಮ್ಮ ತಮ್ಮ ಜಾಬ್ ಕಾರ್ಡ್‌ಗಳಿಗೆ ಇ-ಕೆವೈಸಿ ಮಾಡಿಸಿಕೊಳ್ಳುವುದು. ಇ-ಕೆವೈಸಿ ಮಾಡಿಸಿಕೊಳ್ಳದ ಜಾಬ್ ಕಾರ್ಡ್‌ಗಳು ಮುಂದಿನ ದಿನಗಳಲ್ಲಿ ನಿಷ್ಕ್ರಿಯವಾಗುವ ಸಾಧ್ಯತೆಯಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರು ಸಾಧ್ಯವಾದಲ್ಲಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ತಿಳಿಸಿದರು.

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಉಖಾ) ಕುಮಾರ ಪೂಜಾರ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ (ಜಾಬ್ ಕಾರ್ಡ್‌ಗಳು)ಗಳಿಗೆ ಎನ್‌ಎಂಎಎಸ್ ಆ್ಯಪ್ ಮೂಲಕ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು, ಗ್ರಾಮ ಪಂಚಾಯಿತಿಯ ಗ್ರಾಮ ಕಾಯಕ ಮಿತ್ರರು, ಬಿಎಫ್‌ಟಿ, ಡಿಇಒ ಮತ್ತು ಕಾಯಕ ಬಂಧುಗಳನ್ನು ಸಕ್ರಿಯವಾಗಿ ಇ-ಕೆವೈಸಿ ಕಾರ್ಯದಲ್ಲಿ ತೊಡಗಿಸಿಕೊಂಡು ಪೂರ್ಣಗೊಳಿಸುವಂತೆ ತಿಳಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 52,022 ಸಕ್ರಿಯ ಉದ್ಯೋಗ ಚೀಟಿಗಳಿವೆ. ಸದ್ಯ 11 ಸಾವಿರಕ್ಕೂ ಹೆಚ್ಚು ಜಾಬ್ ಕಾರ್ಡ್‌ಗಳ ಇ-ಕೆವೈಸಿ ಮಾಡಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯ ನೋಂದಾಯಿತ ಸಕ್ರಿಯ ಕೂಲಿಕಾರರು ಇ-ಕೆವೈಸಿಯನ್ನು ಅ. 30ರ ಒಳಗಾಗಿ ಮಾಡಿಸುವುದು ಕಡ್ಡಾಯವಾಗಿದೆ. ಈಗಾಗಲೇ ಗ್ರಾ.ಪಂ ಹಂತದ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಇ-ಕೆವೈಸಿ ಮಾಡುತ್ತಿದ್ದಾರೆ. ಕಾರ್ಡ್‌ಧಾರರು ಸಿಬ್ಬಂದಿಯೊಂದಿಗೆ ಸಹಕರಿಸಿ, ಇ-ಕೆವೈಸಿ ಕಾರ್ಯ ಪೂರ್ಣಗೊಳಿಸಿ.
ಮಲ್ಲಯ್ಯ ಕೆ.
ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಲೂಕು ಪಂಚಾಯಿತಿ ಗದಗ.


Spread the love

LEAVE A REPLY

Please enter your comment!
Please enter your name here