ಹುಬ್ಬಳ್ಳಿ:- ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವಳ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ನಂದಗೋಕುಲ ಬಡಾವಣೆಯಲ್ಲಿ ಜರುಗಿದೆ.
ಪತಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. 31 ವರ್ಷದ ಜಯಶ್ರೀ ಬಡಿಗೇರ್ ಮೃತ ಗೃಹಿಣಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಾನಂದ ಎಂಬುವವರ ಜೊತೆ ಕಳೆದ ಮೇ 21ರಂದು ವಿವಾಹವಾಗಿತ್ತು. ಮದುವೆಗೂ ಮುಂಚೆ ಪತಿ ಶಿವಾನಂದ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ. ತನ್ನ ಹದಿಮೂರು ವರ್ಷಗಳ ಪ್ರೀತಿಯನ್ನು ಮುಚ್ಚಿಟ್ಟು ಶಿವಾನಂದ ಮದುವೆಯಾಗಿದ್ದ. ಈ ಕುರಿತು ಮದುವೆಯಾದ ಬಳಿಕ ಮೃತ ಜಯಶ್ರೀಗೆ ಮಾಹಿತಿ ನೀಡಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಆದರೂ ಕೂಡ ಜಯಶ್ರೀ ಪತಿಯ ಜೊತೆಗೆ ಇರಲು ನಿರ್ಧರಿಸಿದ್ದಳು. ಸಾಯುವ ಮುನ್ನ ರಾತ್ರಿಯೂ ಕೂಡ ಇಬ್ಬರ ನಡುವೆ ಜಗಳವಾಗಿತ್ತು ಎಂದು ತಿಳಿದುಬಂದಿದೆ.
ಜಯಶ್ರೀಗೆ ಶಿವಾನಂದ ಮಾನಸಿಕ ಕಿರುಕುಳ ನೀಡ್ತಿದ್ದ. ಇದೀಗ ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.