ಬೆಂಗಳೂರು: ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಸುಪ್ರಿತಾ (27) ಎಂದು ಗುರುತಿಸಲಾಗಿದೆ. ಸುಪ್ರಿತಾ ಅವರು ಸುಮಾರು ಐದು ವರ್ಷಗಳ ಹಿಂದೆ ಕಿರಣ್ ಕುಮಾರ್ ಅವರನ್ನು ವಿವಾಹವಾಗಿದ್ದರು. ಕಿರಣ್ ಕುಮಾರ್ ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದು, ಸುಪ್ರಿತಾ ಗೃಹಿಣಿಯಾಗಿ ಮನೆಯಲ್ಲಿ ಇದ್ದರು ಎಂದು ತಿಳಿದುಬಂದಿದೆ.
ಕುಟುಂಬಸ್ಥರ ಪ್ರಕಾರ ಸುಪ್ರಿತಾ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬರುತ್ತಿದ್ದರೂ, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.
ಮಾಹಿತಿ ತಿಳಿದು ಹೆಣ್ಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



