ಬೆಂಗಳೂರು: ಮನೆ ಕಳೆದುಕೊಂಡವರಿಗೆ ವಸತಿ ನಿಗಮದಿಂದ ಹಂಚಿಕೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾರನ್ನೂ ಮನೆ ಕಳೆದುಕೊಳ್ಳುವಂತೆ ಮಾಡಿಲ್ಲ. ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡಲಾಗುತ್ತಿದೆ.
ನಾವು ಬುಲ್ಡೋಜರ್ ರಾಜಕಾರಣವನ್ನು ಪಾಲಿಸುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಯಲ್ಲೇ ತೆರವು ಕಾರ್ಯ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವಿಷಯವನ್ನು ನಮ್ಮ ಪಕ್ಷದ ನಾಯಕರಿಗೂ ತಿಳಿಸಲಾಗಿದೆ. ಇಲ್ಲಿನ ಸ್ಥಿತಿಗತಿಗಳನ್ನು ಅರಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪಿಣರಾಯಿ ವಿಜಯನ್ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಇನ್ನೂ ಕೋಗಿಲು ಲೇಔಟ್ ಬಳಿ ಕೆಲವು ಜನರು ಬಿಬಿಎಂಪಿಗೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗವನ್ನು ಕಸದ ವಿಲೇವಾರಿಗೆ ಮೀಸಲಿಟ್ಟ 5 ಎಕರೆ ಪ್ರದೇಶವಾಗಿದ್ದು, ಅಕ್ರಮ ಒತ್ತುವರಿಯನ್ನು ಕಾನೂನುಬದ್ಧವಾಗಿ ತೆರವುಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.



