ಒಂದು ಕಾಲದಲ್ಲಿ ಸ್ಟಾರ್ ನಿರ್ದೇಶಕ ಎನಿಸಿಕೊಂಡ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ಸಖತ್ ಸೈಲೆಂಟ್ ಆಗಿದ್ದಾರೆ. ಅವರ ಸಿನಿಮಾಗಳು ಹೇಳಿಕೊಳ್ಳುವಂತ ಸದ್ದು ಮಾಡುತ್ತಿಲ್ಲ. ಹೀಗಾಗಿ ವರ್ಮಾ ಹೆಚ್ಚಾಗಿಯೇ ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಇದೀಗ ಯಶ್ ನಟನೆಯ ಸೂಪರ್ ಹಿಟ್ ಕೆಜಿಎಫ್ ೨ ಸಿನಿಮಾದ ಬಗ್ಗೆ ಮಾತನಾಡಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ‘ಕೆಜಿಎಫ್ 2’ ಸಿನಿಮಾ ಅತ್ಯಂತ ಕೆಟ್ಟ ಸಿನಿಮಾ, ಆದರೂ ಅದು ಭಾರಿ ಹಿಟ್ ಆಯ್ತು’ ಎಂಬರ್ಥದ ಹೇಳಿಕೆ ನೀಡಿದ್ದಾರೆ. ಪಿಂಕ್ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ‘ಒಬ್ಬ ಖ್ಯಾತ ನಿರ್ದೇಶಕ ನನಗೆ ಕರೆ ಮಾಡಿ, ಕೆಜಿಎಫ್ 2 ಸಿನಿಮಾ ನೋಡಲು ಪ್ರಯತ್ನಿಸಿದೆ ಆದರೆ ನನ್ನ ಕೈಯಲ್ಲಿ 15 ನಿಮಿಷ ಸಹ ನೋಡಲು ಆಗಲಿಲ್ಲ. 15 ನಿಮಿಷ ನೋಡಿ ನಾನು ಬ್ರೇಕ್ ತೆಗೆದುಕೊಂಡೆ ಆ ನಂತರ ಹೋಗಿ ಉಸಿರಾಟದ ವ್ಯಾಯಾಮ, ಪ್ರಾಣಾಯಮ ಮಾಡಿ ಬಂದು ಮತ್ತೆ ನೋಡಲು ಪ್ರಯತ್ನಿಸಿದೆ ಆಗಲೂ ಸಹ 15 ನಿಮಿಷ ಸಹ ನನ್ನಿಂದ ನೋಡಲು ಆಗಲಿಲ್ಲ, ಆ ನಂತರ ಮತ್ತೆ ಹೋಗಿ ಸ್ನಾನ ಮಾಡಿ ಬಂದೆ ಬಲವಂತದಿಂದ ನೋಡಿದರೂ ಇಂಟರ್ವೆಲ್ ವರೆಗೂ ಮಾತ್ರವೇ ನೋಡಲು ಸಾಧ್ಯ ಆಗಿದ್ದು. ಆದರೆ ಇಂಥಹಾ ಸಿನಿಮಾ ಅಷ್ಟು ದೊಡ್ಡ ಹಿಟ್ ಹೇಗಾಯ್ತು ಎಂದು ಅವರು ನನ್ನನ್ನು ಪ್ರಶ್ನೆ ಮಾಡಿದರು’ ಎಂದು ವರ್ಮಾ ಹೇಳಿದ್ದಾರೆ.
‘ಅದಾದ ಎರಡು ದಿನದ ಬಳಿಕ ನಾನು ನನ್ನ ತಂಡದವರ ಜೊತೆ ಮಾತನಾಡುತ್ತಿದ್ದಾಗ ಇದೇ ವಿಷಯ ಚರ್ಚಿಸಿದೆ. ಅಷ್ಟು ಇಲ್ಲಾಜಿಕಲ್ ಆಗಿರುವ ಸಿನಿಮಾ ಇಷ್ಟು ದೊಡ್ಡ ಹಿಟ್ ಆಗಿದ್ದು ಹೇಗೆ ಎಂದು ನಾನು ಪ್ರಶ್ನಿಸಿದೆ. ಆದರೆ ಆ ಇಲ್ಲಾಜಿಕಲ್ ಎನ್ನುವುದೇ ಕೆಜಿಎಫ್ ಪಾಲಿಗೆ ವರವಾಗಿದೆ. ಹಳೆ ಹಾಲಿವುಡ್ ಸಿನಿಮಾಗಳ ಕತೆಯೂ ಇದೆ. ಅವು ಸಹ ಇಲ್ಲಾಜಿಕಲ್ ಆದರೆ ಅವುಗಳ ಯಶಸ್ಸು ನಿಜವೇ ಆಗಿದೆ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.