ಬೆಂಗಳೂರು: ಜಾತಿಗಣತಿ ವರದಿಯದ್ದು ಎನ್ನಲಾದ ಅಂಕಿ ಅಂಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಇದು ಜಾತಿಗಣತಿಯೋ.. ದ್ವೇಷಗಣತಿಯೋ..? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಹಿಂದೆ ಜಾತಿ ಗಣತಿ ವರದಿಯನ್ನು ವಿರೋಧಿಸಿದ್ದ ಡಿಸಿಎಂ ಡಿಕೆಶಿ ಈಗ ಯೂಟರ್ನ್ ಹೊಡೆದಿರುವ ಬಗ್ಗೆ ಕೇಂದ್ರ ಸಚಿವರು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು; ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂ.ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿ ಹಳೇ ಮೈಸೂರು ಜಿಲ್ಲೆಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಸಂಖ್ಯೆ ಎಷ್ಟು? ಎಂದು ಕೇಳಿದ್ದಾರೆ.
ಜಾತಿ ಗಣತಿ ಗಜಪ್ರಸವ ತಥಂಗಕ್ಕೆ ಸಂಪುಟದಲ್ಲಿ ಶಾಸ್ತ್ರೋಕ್ತವಾಗಿ ಅರಿಶಿಣ ಕಂಕುಮ ಹಚ್ಚಿ ಕಡ್ಡಿ ಹಚ್ಚಲಾಗಿದೆ. ಆ ವರದಿಯದ್ದು (!?) ಎನ್ನಲಾದ ಅಂಕಿ-ಅಂಶಗಳು ಎಲ್ಲೆಡೆ ತೇಲಾಡುತ್ತಿವೆ! ಯಾವುದೋ ಅಜ್ಞಾತ ಕೈ ಅದನ್ನು ವ್ಯವಸ್ಥಿತವಾಗಿ ತೇಲಿಬಿಟ್ಟಿದೆ!! ಒಕ್ಕಲಿಗ ಸಮಾಜಕ್ಕೆ ಸೇರಿದ ಅಂಕೆ-ಸಂಖ್ಯೆ ಅಷ್ಟೇ ಅಲ್ಲ, ವೀರಶೈವ ಲಿಂಗಾಯತ ಮತ್ತು ಇನ್ನಿತರೆ ಸಮಾಜಗಳ ಸಂಖ್ಯೆಯೂ ನನಗೆ ಅಚ್ಚರಿ ಹುಟ್ಟಿಸಿದೆ ಎಂದು ಅವರು ಹೇಳಿದ್ದಾರೆ.
ಗಣತಿ ಗ್ಯಾರಂಟಿ ರಾಜ್ಯದಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಲು ಹೂಡಿದ ಷಡ್ಯಂತ್ರ್ಯವೇ? ಅಥವಾ ಸರಣಿ ದರ ಏರಿಕೆ, ಸಾಲುಸಾಲು ಭ್ರಷ್ಟ ಹಗರಣಗಳ ಮುಜುಗರದಿಂದ ಮುಖ ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆಗೆ ಹೊರಳಿಸಲು ರೂಪಿಸಿದ ಸಂಚೇ? ಎಂದು ಶಂಕೆ ವ್ಯಕ್ತಪಡಿಸಿರುವ ಅವರು; ಇಡೀ ರಾಜ್ಯವು ಜಾತಿ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದರೆ, ಕಾಂಗ್ರೆಸ್ ಸರ್ಕಾರದ ಈ ನಡೆ ಕೆಲ ನಿರ್ದಿಷ್ಟ ಸಮುದಾಯಗಳ ಮೇಲೆ ರಾಜಕೀಯ, ಸಾಮಾಜಿಕವಾಗಿ ಹಗೆತನ ಸಾಧಿಸುವ ಮುಂದುವರಿದ ಅಧ್ಯಾಯವೇ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.