ವಿಜಯಸಾಕ್ಷಿ ಸುದ್ದಿ, ಗದಗ: ನೂರಕ್ಕೂ ಹೆಚ್ಚು ವೈವಿಧ್ಯಮಯ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಎಚ್.ಎಸ್. ವೆಂಕಟೇಶಮೂರ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಇವರು ತಮ್ಮ ಕವನಗಳ ಮೂಲಕ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಅನ್ನದಾನಿ ಹಿರೇಮಠ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಎಚ್ಎಸ್ಸ್ವಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತಿ ಪ್ರೊ. ಚಂದ್ರಶೇಖರ ವಸ್ತçದ ಮಾತನಾಡಿ, ಅವರು ಪ್ರಾಚೀನ ಸಾಹಿತ್ಯವನ್ನು ಅಧ್ಯಯನ ಮಾಡಿ, ಪ್ರಸ್ತುತ ದಿನಮಾನದ ಕವಿಗಳಾದ ಕುವೆಂಪು, ಬೇಂದ್ರೆ, ಪುತಿನ, ನರಸಿಂಹಸ್ವಾಮಿಯಂತಹ ಕವಿಗಳಿಂದ ಪ್ರಭಾವಿತರಾಗಿದ್ದರೂ ತಮ್ಮದೇ ಕಾವ್ಯ ಪಥವನ್ನು ಸೃಷ್ಟಿಸಿ, ಸರಳ ಸಾಲುಗಳ ಮೂಲಕ ಸಹೃದಯರ ಮನದಲ್ಲಿ ಸದಾ ನೆಲೆಸಿದ್ದಾರೆ. ಅವರ ಬರೆಹವನ್ನು ಓದುವ ಮೂಲಕ ಅವರನ್ನು ಅರ್ಥೈಸಿಕೊಳ್ಳುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ತಮ್ಮ ಗೀತೆಗಳ ಮೂಲಕ ಸಹೃದಯರ ಭಾವ ಪ್ರಪಂಚವನ್ನು ವಿಸ್ತರಿಸಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ರಂಗವನ್ನು ಪ್ರವೇಶಿಸಿ ಸಾಹಿತ್ಯಿಕ ರಂಗನ್ನು ನೀಡಿದ್ದಾರೆ. ಮಕ್ಕಳ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿಯನ್ನು ತಾಳಿ ಶಿಶು ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಎಚ್.ಎಸ್. ವೆಂಕಟೇಶಮೂರ್ತಿ ಅವರ ಕವಿತೆಗಳನ್ನು ಶಿಲ್ಪಾ ಮ್ಯಾಗೇರಿ ಹಾಗೂ ಜಯಶ್ರೀ ಅಂಗಡಿ ವಾಚಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಂ. ಕಾತರಕಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ಸತೀಶ ಚನ್ನಪ್ಪಗೌಡ್ರ, ಅಮರೇಶ ರಾಂಪೂರ, ಬಸವರಾಜ ಗಣಪ್ಪನವರ, ಬಿ.ಎಸ್. ಹಿಂಡಿ, ಜೆ.ಎ. ಪಾಟೀಲ, ತುಷಾರ ಕುರಿ, ಶೇಖರಪ್ಪ ಕಳಸಾಪೂರ, ಬಿ.ಜಿ. ಗಿರಿತಿಮ್ಮಣ್ಣವರ, ಎಂ.ಎಸ್. ಹಾಲಶೆಟ್ಟಿ, ಪಲ್ಲವಿ ಹಿರೇಮಠ, ಜಯದೇವ ಹಿರೇಮಠ, ಕೆ.ಜಿ. ವ್ಯಾಪಾರಿ, ಬಿ.ಎನ್. ಅಂಗಡಿ, ಕಿರಣ ಗುಗ್ಗರಿ ಮೊದಲಾದವರು ಭಾಗವಹಿಸಿದ್ದರು.



