ಹುಬ್ಬಳ್ಳಿ:- ನಗರದ ಕೇಶ್ವಾಪುರ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಬಟ್ಟೆ ಬಿಚ್ಚಿ ಥಳಿಸಿದ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ನ ನಗರ ಪಾಲಿಕೆ ಸದಸ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಈ ರೀತಿ ದರ್ಪ ಮೆರೆದಿದ್ದಾರೆ ಎನ್ನಲಾಗುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತೆ ಸುಜಾತಾ ಅಲಿಯಾಸ್ ವಿಜಯಲಕ್ಷ್ಮೀ ಈ ಗಂಭೀರ ಆರೋಪ ಮಾಡಿದ್ದಾರೆ. ಸುಜಾತಾ ಹಂಡಿ ವಿರುದ್ಧ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಅದೇ ದೂರಿನ ವಿಚಾರವಾಗಿ ಪೊಲೀಸರು ದರ್ಪ ನಡೆಸಿದ್ದಾರೆ ಎಂದು ದೂರಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಅಧಿಕಾರಿಗಳ ಜೊತೆ ಸುಜಾತಾ ಹಂಡಿ ತೆರಳಿದ್ದು, ಈ ವೇಳೆ ಸುವರ್ಣ ಕಲ್ಲಕುಂಟ್ಲಾ ಮತ್ತು ಅವರ ಬೆಂಬಲಿಗರು ಗಲಾಟೆ ನಡೆಸಿದ್ದರು. ಘಟನೆ ಸಂಬಂಧ ಕೇಶ್ವಾಪುರ ಠಾಣೆಗೆ ದೂರು, ಪ್ರತಿದೂರು ದಾಖಲಾಗಿತ್ತು. ಕಾರ್ಪೊರೇಟರ್ ದೂರು ಆಧರಿಸಿ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಕೂಗಾಡಿದ್ದರು.
ಈ ವೇಳೆ ವಿವಸ್ತ್ರಗೊಳಿಸಿ ಕೇಶ್ವಾಪುರ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಸುಜಾತಾ ಹಂಡಿ ಕೆಲ ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಇವರ ಮೇಲೆ ಖಾಕಿ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.



