ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಶವ ಪ್ಯಾಕ್ ಮಾಡುವ ಸಂದರ್ಭದಲ್ಲಿ ಲಂಚ ವಸೂಲಾತಿ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಐವರು ಹೊರ ಗುತ್ತಿಗೆ (ಡಿ ಗ್ರೂಪ್) ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ನಿವಾಸಿ ಗದ್ದೆಮ್ಮಾ (52) ಪಿತ್ತಕೋಶದ ಕಲ್ಲುಗಳಿಂದ ಅಸ್ವಸ್ಥರಾಗಿದ್ದರು. ಹೀಗಾಗಿ ಜ.31ರಂದು ಅವರನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲು ಮಾಡಲಾಗಿತ್ತು. ದುರಾದೃಷ್ಟವಶಾತ್ ಶಸ್ತ್ರಚಿಕಿತ್ಸೆ ನಂತರ ಗದ್ದೆಮ್ಮಾ ಮೃತಪಟ್ಟಿದ್ದರು.
ಆದರೆ ಮಹಿಳೆಯ ಶವವನ್ನು ಪ್ಯಾಕ್ ಮಾಡಿ ವಾಹನಕ್ಕೆ ಹಾಕಲು ಐವರು ಡ್ರಿ ಗ್ರೂಪ್ ಸಿಬ್ಬಂದಿ ಹಣ ವಸೂಲಾತಿ ಮಾಡಿಕೊಂಡಿದ್ದರು. ಆರಂಭದಲ್ಲಿ 200 ರೂಪಾಯಿ ಪಡೆದ ಬಳಿಕ, ಶವವನ್ನು ವಾಹನಕ್ಕೆ ಹಾಕಿದ ಮೇಲೆ ಮತ್ತಷ್ಟು 200 ರೂಪಾಯಿ ಕೇಳಿದ್ದರಿಂದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯನ್ನು ವಿಡಿಯೋ ಮಾಡಿ ಅವರು ಸಾರ್ವಜನಿಕರಿಗೆ ತೋರಿಸಿದ್ದರು. ಲಂಚಾವತಾರ ಬಯಲಾದ ಬಳಿಕ ಹಣ ವಸೂಲಿ ಮಾಡಿದ ಐವರು ಡಿ ಗ್ರೂಪ್ ನೌಕರರನ್ನು ಅಮಾನತು ಮಾಡಲಾಗಿದೆ



