ಹುಬ್ಬಳ್ಳಿ: ನಗರದಲ್ಲಿ ಸದ್ದು ಮಾಡುತ್ತಿರುವ ‘ಲವ್ ಜಿಹಾದ್’ ಪ್ರಕರಣ ಮತ್ತೊಂದು ಸ್ಫೋಟಕ ತಿರುವು ಪಡೆದಿದೆ. ಪ್ರೀತಿ ಮತ್ತು ಭರವಸೆಯ ಹೆಸರಿನಲ್ಲಿ ಆರಂಭವಾದ ಸಂಬಂಧ ಇದೀಗ ಗಂಭೀರ ಅಪರಾಧ ಆರೋಪಗಳ ಜಾಲವಾಗಿ ಬದಲಾಗಿದೆ.
ಜಿಮ್ ಟ್ರೈನರ್ ಸಮೀರ್, ‘ನಿನ್ನನ್ನು ದೊಡ್ಡ ಮಾಡೆಲ್ ಮಾಡುತ್ತೇನೆ’ ಎಂಬ ಕನಸು ತೋರಿಸಿ ಯುವತಿಯನ್ನು ತನ್ನತ್ತ ಸೆಳೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆಕೆಯ ವಿಶ್ವಾಸವನ್ನು ಗಳಿಸಿದ ಬಳಿಕ, ಆತನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇದಲ್ಲದೆ, ಈ ಪ್ರಕರಣಕ್ಕೆ ಈಗ ಶಾಕ್ ನೀಡುವ ಮತ್ತೊಂದು ಅಂಶ ಕೇಳಿ ಬಂದಿದೆ. ಯುವತಿ ಗರ್ಭಿಣಿಯಾಗಿದ್ದು, ನಂತರ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಸಮೀರ್ ವಿರುದ್ಧ ಕೇಳಿ ಬಂದಿದೆ. ಈ ಮಾಹಿತಿ ಹೊರಬಿದ್ದ ಬಳಿಕ ಪ್ರಕರಣದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.
ಮೊದಲಿನಿಂದಲೇ ಈ ಪ್ರಕರಣದಲ್ಲಿ ಡ್ರಗ್ ನೀಡಿ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ ಹಾಕುವುದು, ಬ್ಲ್ಯಾಕ್ಮೇಲ್ ಮಾಡುವುದು ಎಂಬ ಗಂಭೀರ ಆರೋಪಗಳು ಇದ್ದವು. ಆದರೆ, ಸಮೀರ್ ಈ ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತಾ, ‘ವಿಡಿಯೋ ನಾನು ಮಾಡಿಲ್ಲ, ಆಕೆಯೇ ಚಿತ್ರೀಕರಿಸಿದ್ದಾಳೆ’ ಎಂದು ಹೇಳಿಕೆ ನೀಡಿದ್ದಾನೆ.
ಈ ಪರಸ್ಪರ ವಿರುದ್ಧ ಹೇಳಿಕೆಗಳ ನಡುವೆ, ಸತ್ಯವೇನು ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ. ಪೊಲೀಸರು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಇಬ್ಬರನ್ನೂ ಮುಖಾಮುಖಿಯಾಗಿ ವಿಚಾರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.



