ಹುಬ್ಬಳ್ಳಿ:- ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿ ತುಂಬಾ ಆಘಾತಕಾರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿ ತೀರ ಆಘಾತಕಾರಿ. ಅತ್ಯಂತ ಪ್ರವಾಸಿಗರ ಆಕರ್ಷಕ ಸ್ಥಳದಲ್ಲಿ ನಿನ್ನೆ ಮಧ್ಯಾಹ್ನ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ವೇಳೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ರಾವ್ ಮೃತ ಪಟ್ಟಿರೋದು ದುರದೃಷ್ಟಕರ.
ಉಗ್ರರ ದಾಳಿಯ ಕುರಿತು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ಗೃಹ ಸಚಿವರಿಂದ ಮಾಹಿತಿ ಪಡೆದಿದ್ದು, ಪ್ರವಾಸಿ ತಾಣದಲ್ಲಿ ಸಿಲುಕಿರುವವರ ರಕ್ಷಣೆ ಹಾಗೂ ಪರಿಸ್ಥಿತಿ ಹತೋಟಿಗೆ ತರಲು ಸೂಚನೆ ನೀಡಿದ್ದಾರೆ. ಈಗಾಗಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ಶ್ರೀನಗರಗೆ ತೆರಳಿದ್ದಾರೆ.
ಶಾಂತಿ ಕೆಡವಲು ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರ ಆಕರ್ಷಣೀಯ ತಾಣದಲ್ಲಿ ಆತಂಕ ನಿರ್ಮಾಣ ಮಾಡಲು ಉಗ್ರರು ದಾಳಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ. ಈ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಅವರ ಕುಟುಂಬಗಳಿಗೆ ಶಕ್ತಿ ನೀಡಲು ನಾನು ಪ್ರಾರ್ಥಿಸುತ್ತೇನೆ ಎಂದರು.