ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮಾಜ ಬಾಂಧವರು ಉಪವಾಸ (ರೋಜಾ) ವೃತವನ್ನು ಕಟ್ಟುನಿಟ್ಟಾಗಿ ಆಚರಿಸುವದು ಸಹಜ. ದೊಡ್ಡವರು ಈ ವೃತದಲ್ಲಿ ಪಾಲ್ಗೊಳ್ಳುತ್ತಾರೆ, ಅಲ್ಲದೆ ಕೆಲಸದ ಒತ್ತಡದಲ್ಲಿ ಕೆಲವೊಂದು ದಿವಸಗಳ ರೋಜಾ ತಪ್ಪಿಸಿಕೊಂಡಿರುವವರೂ ಉಂಟು. ಆದರೆ, ಪಟ್ಟಣದ ಪುಟ್ಟ ಪೋರನೊಬ್ಬ ಪವಿತ್ರ ರಂಜಾನ್ ಮಾಸದಲ್ಲಿ ಪೂರ್ತಿಯಾಗಿ ಉಪವಾಸ ವೃತ ಕೈಗೊಂಡು ಗಮನ ಸೆಳೆದಿದ್ದಾನೆ.
ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ವಿಶೇಷ ಎಂಬತೆ ಪಟ್ಟಣದಲ್ಲಿ 6 ವರ್ಷ ವಯಸ್ಸಿನ ಪುಟ್ಟ ಬಾಲಕ ಮಹಮ್ಮದ ಝಹೈನ ನಾಲಬಂದ ದೊಡ್ಡವರೊಂದಿಗೆ ಒಟ್ಟು 27 ದಿನ ಉಪವಾಸ ವೃತ ಪೂರ್ಣಗೊಳಿಸಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ಈ ಬಾಲಕ ಮುಂದಾಗಿರುವದು ಉತ್ತಮ ಬೆಳವಣಿಗೆಯಾಗಿದೆನೀತ ಪಟ್ಟಣದ ಮಕಾನಗಲ್ಲಿಯ ಅಂಗನವಾಡಿಯಲ್ಲಿ ಯುಕೆಜಿ ಓದುತ್ತಿದ್ದಾನೆ.
ಈ ಬಾಲಕ ಕಳೆದ ವರ್ಷ ರಂಜಾನ್ ವೇಳೆ ಎರಡು ದಿನ ಉಪವಾಸ ಆಚರಿಸಿದ್ದ. ಆದರೆ ಈ ಬಾರಿ ರಂಜಾನ್ ಮಾಸದ ಮೊದಲ ದಿನದಿಂದಲೂ ಉಪವಾಸ ಮಾಡಲು ಮುಂದಾಗಿದ್ದು, ಮನೆಯಲ್ಲಿ ಹಿರಿಯರು ಉಪವಾಸ (ರೋಜಾ) ಮಾಡುವುದನ್ನು ನೋಡಿ ತಾನೂ ನಿತ್ಯ ನಸುಕಿನ ಜಾವ 4ಕ್ಕೆ ಎದ್ದು ತಂದೆ ದರ್ಬೇಶ ನಾಲಬಂದ (ತರಕಾರಿ ವ್ಯಾಪಾರಿ) ತಾಯಿ ಶಾಹಿನ್ ಹಾಗೂ ಮನೆಯವರೆಲ್ಲರ ಜೊತೆ ಪ್ರಾರ್ಥನೆ ಸಲ್ಲಿಸಿ, ಸಂಜೆ ಇಪ್ತಾರ್‌ನಲ್ಲಿ ಬಾಗವಹಿಸಿದ್ದಾನೆ. ಈ ವೇಳೆ ಎಲ್ಲ ಮಕ್ಕಳಂತೆ ಶಾಲೆಗೂ ಹಾಜರಾಗಿದ್ದಾನೆ. ಮಗನ ಕಠಿಣ ಉಪವಾಸ ಕಂಡು ಮನೆಯವರು ಸಹ ಹೆಮ್ಮೆ ಪಡುತ್ತಿದ್ದಾರಲ್ಲದೆ, ಕಠಿಣ ಉಪವಾಸಕ್ಕೆ ಮುಸ್ಲಿಂ ಸಮಾಜದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.