ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಜನಪ್ರತಿನಿಧಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಂಘಟನೆಗಳು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸೆ.15ರಂದು ಮುಂಜಾನೆ ಸರಿಯಾಗಿ 9 ಗಂಟೆಗೆ ತಾಲೂಕಿನ ಸೂರಣಗಿ ಗ್ರಾಮದಿಂದ ಪ್ರಾರಂಭವಾಗುವ ಬೃಹತ್ ಮಾನವ ಸರಪಳಿ ಅಭೂತಪೂರ್ವ ಯಶಸ್ಸು ಕಾಣುವ ವಿಶ್ವಾಸವನ್ನು ಸಮಸ್ತ ಆಡಳಿತ ಹೊಂದಿದೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ತಹಸೀಲ್ದಾರ ಕಚೇರಿಯಲ್ಲಿ ಗುರುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ ನಿರ್ಮಿಸುವ ಕುರಿತು ವಿವಿಧ ಸಂಘಟನೆಗಳ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ರಾಜ್ಯಾದ್ಯಂತ ಸೆ.15ರಂದು ಬೆಳಿಗ್ಗೆ 9 ಗಂಟೆಯಿಂದ ಮಾನಮ ಸರಪಳಿ ನಿರ್ಮಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲು ಸರಕಾರದ ನಿರ್ದೇಶನ ನೀಡಿದಂತೆ ತಾಲೂಕಿನ ಬಾಲೇಹೊಸೂರ ಸರಹದ್ದಿನಿಂದ ಪ್ರಾರಂಭವಾಗಿ ಸೂರಣಗಿ, ನೆಲೋಗಲ್ ಗ್ರಾಮದ ಸರಹದ್ದಿನವರೆಗೆ ಸುಮಾರು 18 ಕಿ.ಮಿ ಮಾನವ ಸರಪಳಿ ನಿಮಾಣ ಮಾಡಲಿದ್ದು, ತಾಲೂಕಿನಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಎಲ್ಲ ಇಲಾಖೆಗಳವರು, ವಿವಿಧ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ರೈತ ಸಂಘಟನೆಗಳು, ಸ್ತ್ರೀಶಕ್ತಿ ಮಹಿಳಾ ಸ್ವ-ಸಹಾಯ ಸಂಘಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲಿದ್ದಾರೆ. ಸುಮಾರು 18ರಿಂದ 20 ಸಾವಿರ ಜನರು ಸೇರುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಇದಕ್ಕಾಗಿ ತಾಲೂಕಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.
ಈಗಾಗಲೇ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತು ಜಿ.ಪಂ ಕಾರ್ಯನಿರ್ವಹಕ ಅಧಿಕಾರಿ ಸಿ.ಭರತ್ ಅವರು ತಾಲೂಕಾ ವ್ಯಾಪ್ತಿಗೆ ಬರುವ ಸೂರಣಗಿ, ಬಾಲೇಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಎಲ್ಲ ಗ್ರಾಮಸ್ಥರು ಕಾರ್ಯಕ್ರಮ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಇ.ಓ. ಕೃಷ್ಣಪ್ಪ ಧರ್ಮರ, ಪಿ.ಎಸ್.ಐ ಈರಪ್ಪ ರಿತ್ತಿ, ಗ್ರೇಡ್ 2 ತಹಸೀಲ್ದಾರ ಮಂಜುನಾಥ ಅಮಾಸಿ, ಉಪತಹಸೀಲ್ದಾರ ಪ್ರಶಾಂತ ಕಿಮಾಯಿ, ಪ್ರಶಾಂತ ಸನದಿ, ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್. ಹಿರೇಮಠ, ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಶಿವಾನಂದ ಅಜ್ಜಣ್ಣವರ, ಜೆ.ಎ. ಮನಿಯಾರ, ಈಶ್ವರ ಮೇಡ್ಲೇರಿ ಸೇರಿದಂತೆ ಅನೇಕರಿದ್ದರು.
ಅಂದು ಮುಂಜಾನೆ 9.15ಕ್ಕೆ ಸಂವಿಧಾನ ಪೀಠಿಕೆಯನ್ನು ಓದಿ, ರಾಷ್ಟçಗೀತೆ, ಜೈಹಿಂದ್ ಘೋಷಣೆಗಳನ್ನು ಮೊಳಗಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಹೋಗಿ ಬರಲು ವಾಹನಗಳ ವ್ಯವಸ್ಥೆ ಕಲ್ಪಿಸಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಬನ್ನಿ, ಅಭೂತಪೂರ್ವ ಯಶಸ್ಸಿನಲ್ಲಿ ಪಾಲ್ಗೊಳ್ಳಿ ಎಂದು ವಾಸುದೇವ ಸ್ವಾಮಿ ಕರೆ ನೀಡಿದರು.