ವಿಜಯಸಾಕ್ಷಿ ಸುದ್ದಿ, ಬ್ಯಾಡಗಿ: ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಧರ್ಮವೇ ಜೀವನದ ಜೀವಾಳ. ಮನಕ್ಕೆ ಶಾಂತಿ, ಆತ್ಮಕ್ಕೆ ಆನಂದ ಕೊಡುವುದು ಧರ್ಮ. ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟಪ್ರಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಂಯೋಜಿಸಿದ್ದ ಕಾರ್ತಿಕೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು. ಸನ್ಮಾರ್ಗದಲ್ಲಿ ಮುನ್ನಡೆಯುವ ಛಲ ಬೇಕು. ಧರ್ಮ ಮತ್ತು ಸಂಸ್ಕೃತಿಗಳ ಪರಿಪಾಲನೆ ಅಗತ್ಯವಾಗಿದೆ. ಅಶಾಂತಿಯಿಂದ ತತ್ತರಿಸುತ್ತಿರುವ ಇಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡು ಒಳ್ಳೆಯ ದಾರಿಯತ್ತ ನಡೆಯಬೇಕು. ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು. ಒಳಗಿರುವ ಕತ್ತಲೆ ಕಳೆಯಲು ಗುರುವಿನ ಜ್ಞಾನ ಕಿರಣದ ಅಗತ್ಯವಿದೆ. ಮನುಷ್ಯ ಮನೆ, ಊರು, ಬಟ್ಟೆ, ಸಂಬಂಧ ಮತ್ತು ಸ್ನೇಹಿತರನ್ನು ಬದಲಾಯಿಸುತ್ತಾನೆ. ಆದರೂ ಅವನಿಗೆ ನೆಮ್ಮದಿ ಇಲ್ಲ. ಏಕೆಂದರೆ ಅವನು ತನ್ನನ್ನು ತಾನು ಬದಲಾಯಿಸಿಕೊಳ್ಳುವುದಿಲ್ಲ. ಯಾರಿಗೆ, ಯಾವಾಗ, ಏನು, ಎಷ್ಟು ಕೊಡಬೇಕೆಂಬುದು ಆ ಭಗವಂತನಿಗೆ ಗೊತ್ತು. ಭರವಸೆ ಮತ್ತು ಕನಸುಗಳು ನಮ್ಮ ಕೂದಲು ಮತ್ತು ಉಗುರಿನ ಹಾಗಿರಬೇಕು. ಕತ್ತರಿಸಿದಷ್ಟು ಮತ್ತೆ ಬೆಳೆಯುತ್ತಿರಬೇಕು. ಸಕಲ ಜೀವಾತ್ಮರಲ್ಲಿ ಅಡಗಿರುವ ಪರಮಾತ್ಮ ಒಬ್ಬನೇ ಇದ್ದಾನೆ ಎಂಬ ಉದಾತ್ತ ನಿಲುವನ್ನು ಹೊಂದಿದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿ ವರುಷ ಕಾರ್ತಿಕ ದೀಪೋತ್ಸವ ಹಾಗೂ ಧರ್ಮ ಸಮಾರಂಭ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಶಿರಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಹಿರೇಮಠ ಮಂಜಯ್ಯನವರು ತಮ್ಮ ಸೇವೆ ಪರಿಶ್ರಮದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹರುಷ ವ್ಯಕ್ತಪಡಿಸಿದರು.
ಗುಡ್ಡದಮಲ್ಲಾಪುರದ ಮೂಕಪ್ಪ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಬ್ಯಾಡಗಿ ಚನ್ನಮಲ್ಲಿಕಾರ್ಜುನ ಶ್ರೀಗಳು, ಕೂಡಲದ ಮಹೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಗುಬ್ಬಿ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಅಡ್ನೂರು ಅಭಿನವ ಪಂಚಾಕ್ಷರ ಶಿವಾಚಾರ್ಯರು, ಅಕ್ಕಿಆಲೂರು ಚಂದ್ರಶೇಖರ ಶಿವಾಚಾರ್ಯರು, ಕುಮಾರಪಟ್ಟಣದ ಜಗದೀಶ್ವರ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಮಾಜಿ ಪುರಸಭಾಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಸುಜಾತಾ ಕೊಪ್ಪದ ಇವರಿಂದ ಪ್ರಾರ್ಥನೆ, ಶಿಕ್ಷಕ ಮಹಾದೇವಪ್ಪ ಕರಿಯಣ್ಣನವರಿಂದ ಸ್ವಾಗತ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ಜರುಗಿತು. ಬ್ಯಾಡಗಿ ಶಾಸಕರಾದ ಬಸವರಾಜ ಶಿವಣ್ಣನವರ ಇವರ ಅನುದಾನದಲ್ಲಿ ಶಿರಡಿ ಸಾಯಿಬಾಬಾ ಮಂದಿರದ ಪಕ್ಕದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನಕ್ಕೆ ಶಿಲಾನ್ಯಾಸ ಶ್ರೀ ರಂಭಾಪುರಿ ಜಗದ್ಗುರುಗಳಿಂದ ನಡೆಯಿತು.
ಶಿರಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿಗಳಾದ ಮಂಜಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹಣ್ಣುಗಳ ಭಾರದಿಂದ ಮರ ಬಗ್ಗುತ್ತದೆ. ನೀರು ತುಂಬಿದ ಮೋಡಗಳು ಭೂಮಿಗೆ ಮಳೆಗರೆಯುತ್ತವೆ. ಉತ್ತಮರಲ್ಲಿ ಬೇಕಾದಷ್ಟು ಐಶ್ವರ್ಯವಿರಲಿ, ಅಹಂಕಾರ ಇರುವುದಿಲ್ಲ. ಒಳ್ಳೆ ಅರ್ಥ ತುಂಬಿದ ಮಾತು ಮನುಷ್ಯನಿಗೆ ನಿಜವಾದ ಐಶ್ವರ್ಯ ತಂದುಕೊಡಬಲ್ಲವು. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಬಲದಿಂದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತಿವೆ ಎಂದರು.



