ವಿಜಯಸಾಕ್ಷಿ ಸುದ್ದಿ, ಗದಗ: ಮಾನವನನ್ನು ಮಾನವನನ್ನಾಗಿ ಕಾಣಬೇಕು. ಮನುಷ್ಯರನ್ನು ಪ್ರೀತಿಸುವುದೇ ಮನುಷ್ಯತ್ವ. ಚಂದ್ರಲೋಕ ಸಮೀಪವಾಗಿದೆ. ಮನುಷ್ಯರ ಮನಸ್ಸುಗಳು ದೂರವಾಗುತ್ತಿವೆ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನೀಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2778ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕುವೆಂಪುರವರಿಗೆ ನಾಡು-ನುಡಿಯ ಬಗ್ಗೆ ಅಪಾರವಾದ ಪ್ರೀತಿ ಇತ್ತು. ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿದವರು ಕುವೆಂಪು. ಕೇವಲ 20ನೇ ವಯಸ್ಸಿನಲ್ಲಿ ನಾಡಗೀತೆಯನ್ನು ಬರೆದರು. ಕುವೆಂಪು ನಿಸರ್ಗದ ಕವಿ. ಭಾವದ ಐಶ್ವರ್ಯ, ಭಾವದ ರಸ ಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯಿಗಳನ್ನು ರೊಮಾಂಚನಗೊಳಿಸುತ್ತದೆ ಎಂದರು.
ವಿದುಷಿ ಪ್ರಭಾವತಿ ಇನಾಮದಾರ, ಸಂಗೀತ ಶಿಕ್ಷಕಿ, ಕೆ.ಎಲ್.ಇ ಪ್ರೌಢಶಾಲೆ ಬೆಂಗಳೂರು ಇವರು ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿದರು. ಧರ್ಮಗ್ರಂಥ ಪಠಣವನ್ನು ಗೌರಿ ಎಸ್. ಬಳಿಗೇರ ಹಾಗೂ ವಚನ ಚಿಂತನವನ್ನು ನಿಧಿ ಮಹಾಂತ ಕಟ್ಟಿಮನಿ ಇವರು ಪ್ರಸ್ತುತಪಡಿಸಿದರು.
ದಾಸೋಹ ಸೇವೆಯನ್ನು ಅವಿನಾಶ್ ಮತ್ತು ಅಭಿಲಾಷ ಅವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾ ಪ್ರಭು ಗಂಜಿಹಾಳ ಹಾಗೂ ಕುಟುಂಬ ವರ್ಗದವರು ಗದಗ, ಗುರುಪಾದ ಪರಪ್ಪ ಕಟ್ಟಿಮನಿ ಹಾಗೂ ಕುಟುಂಬ ವರ್ಗದವರು ಗದಗ, ಪ್ರಮೀಳಾ ಬಾಯಿ ಮಾಲಿಪಾಟೀಲ ಇಟಗಿ ಹಾಗೂ ಶಿವಪ್ಪ ತಿಮ್ಮಪ್ಪ ಯರಾಶಿ ಬನ್ನಿಕೊಪ್ಪ ಇವರುಗಳು ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಮಹೇಶ್ ಗಾಣಿಗೇರ ಸ್ವಾಗತಿಸಿದರು, ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪಆಯುಕ್ತರಾದ ಗೋವಿಂದಪ್ಪ ಗೌಡಪ್ಪಗೋಳ ವಿಶ್ವಮಾನವ ದಿನಾಚರಣೆ ಕುರಿತು ಮಾತನಾಡುತ್ತಾ, ಶಿವಾನುಭವ ಶಿವನಲ್ಲಿ ಒಂದಾಗುವ ಪರಿ. ಶಿವನ ಅನುಭವ ಪಡೆಯುವ ಪವಿತ್ರ ವೇದಿಕೆ. ಇಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಆಚರಿಸುವುದು ಸ್ತುತ್ಯ. ಕನ್ನಡಕ್ಕೆ ಕುವೆಂಪು ವಿಶ್ವಮಾನ್ಯತೆ ತಂದು ಕೊಟ್ಟರು. ಕನ್ನಡ ಸರಸ್ವತಿಯ ಕಿರೀಟದ ರತ್ನ ಬಸವಣ್ಣ ಎಂದವರು. ಪ್ರಕೃತಿಯ ಆರಾಧನೆ ಮಾಡಿ ಅಲ್ಲಿ ದೇವರಿದ್ದಾನೆ ಎನ್ನುತ್ತಾ ಪ್ರಕೃತಿ ಪ್ರೇಮದ ಮೂಲಕ ವಿಶ್ವಮಾನವ ಪ್ರಜ್ಞೆ ಸಾರಿದವರು. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಈ ಮೂರು ಸಂದೇಶಗಳನ್ನು ಕೊಟ್ಟರು ಎಂದರು.



